ಅಂತರಾಷ್ಟ್ರೀಯ ಪಂದ್ಯಗಳಲ್ಲಿ ದೊಡ್ಡ ಸಾಧನೆ ಮಾಡಿದ ಕ್ರಿಕೆಟಿಗರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡುತ್ತದೆ. ಲಾರ್ಡ್ಸ್ನ ಪವೆಲಿಯನ್ನಲ್ಲಿ ಎಂಸಿಸಿಯಿಂದ ಹಾಲ್ ಆಫ್ ಗೌರವ ಸಿಗುತ್ತದೆ. ಆದರೆ ಐಪಿಎಲ್ನಲ್ಲಿ ಒಂದು ಫ್ರಾಂಚೈಸಿ ಪರ ದೊಡ್ಡ ಸಾಧನೆ ಮಾಡಿದ ಕ್ರಿಕೆಟಿಗರಿಗೆ ಗೌರವ ಸೂಚಕ ಹಾಲ್ ಆಫ್ ಫೇಮ್ ಕಾರ್ಯಕ್ರಮವನ್ನು ಆರ್ಸಿಬಿ ಪರಿಚಯಿಸಿದೆ.
ಬೆಂಗಳೂರು ಮೂಲದ ಫ್ರಾಂಚೈಸಿ ತನ್ನ ಮಾಜಿ ಆಟಗಾರರಿಗಾಗಿ ಇದೇ ಮೊದಲ ಬಾರಿಗೆ ‘ಹಾಲ್ ಆಫ್ ಫೇಮ್’ ಗೌರವ ನೀಡಿದೆ. ಟಿ20 ಕ್ರಿಕೆಟ್ನ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಮತ್ತು 360 ಡಿಗ್ರಿ ಆಟಗಾರ ಎಬಿ ಡಿವಿಲಿಯರ್ಸ್ ಈ ಗೌರವ ಪಡೆದ ಮೊದಲ ಆಟಗಾರರಾಗಿದ್ದಾರೆ. ಎಬಿ ಡಿವಿಲಿಯರ್ಸ್ ಆರ್ಸಿಬಿ ಜೆರ್ಸಿಯಲ್ಲಿ 11 ವರ್ಷ ಆಡಿದ್ದರೆ, ಕ್ರಿಸ್ ಗೇಲ್ 7 ವರ್ಷ ಆಡಿದ್ದರು.
ಕ್ರಿಸ್ ಗೇಲ್ 2011ರಲ್ಲಿ ಡಿರ್ಕ್ ನ್ಯಾನ್ಸ್ ಗಾಯಗೊಂಡಾಗ ಬದಲಿ ಆಟಗಾರನಾಗಿ ಆರ್ ಸಿಬಿ ತಂಡವನ್ನು ಕೂಡಿಕೊಂಡಿದ್ದರು. 2011ರಿಂದ 2017ರವರೆಗೆ ಆರ್ ಸಿಬಿ ತಂಡದಲ್ಲಿದ್ದ ಗೇಲ್, 91 ಪಂದ್ಯಗಳಿಂದ, 21 ಅರ್ಧಶತಕ ಹಾಗೂ ಐದು ಶತಕ ಸೇರಿದಂತೆ 3420 ರನ್ ಬಾರಿಸಿದ್ದರು. ಪುಣೆ ವಾರಿಯರ್ಸ್ ವಿರುದ್ಧ ಚಿನ್ನಸ್ವಾಮಿ ಮೈದಾನದಲ್ಲಿ 175 ರನ್ ಗಳ ಇನ್ನಿಂಗ್ಸ್ ಆಡಿದ್ದು, ಆರ್ ಸಿಬಿ ಪರವಾಗಿ ಹಾಗೂ ಐಪಿಎಲ್ ನಲ್ಲಿ ಆಟಗಾರನೊಬ್ಬನ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಎಬಿಡಿ ವಿಲಿಯರ್ಸ್ ಕಷ್ಟದ ಕಾಲದಲ್ಲಿ ಆರ್ ಸಿಬಿ ಬಲವಾಗಿ ನಿಲ್ಲುತ್ತಿದ್ದ ಆಟಗಾರ. 2011 ರಿಂದ 2021ರವರೆಗೆ ಆರ್ ಸಿಬಿ ಪರವಾಗಿ ವಿಲಿಯರ್ಸ್ ಆಡಿದ್ದರು. ಆರ್ ಸಿಬಿ ಪರ 157 ಪಂದ್ಯಗಳನ್ನು ಆಡಿದ್ದ ಎಬಿಡಿ, 41.10ರ ಸರಾಸರಿಯಲ್ಲಿ 4522 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ, 37 ಅರ್ಧಶತಕ ಸೇರಿದೆ. ಎಬಿಡಿ ವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಆರ್ಸಿಬಿ ಕಂಡ ಅತ್ಯದ್ಭುತ ಆಟಗಾರರಾಗಿದ್ದರು ಅನ್ನುವುದು ನಿಸ್ಸಂಶವಾಗಿದೆ.