ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರು. ಏಕದಿನ, ಟಿ20 ಮತ್ತು ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅದ್ಭುತವಾಗಿ ತಂಡವನ್ನು ಮುನ್ನಡೆಸುತ್ತಿದ್ದರು. ಆದರೆ ಯಾವಾಗ ಟಿ20ಯಲ್ಲಿ ನಾಯಕತ್ವ ಬೇಡ ಅಂದರೋ ಆವತ್ತಿನಿಂದ ಶನಿ ಬೆನ್ನಹಿಂದೆ ಬಿದ್ದಿದೆ. ಮೊದಲಿಗೆ ವಿರಾಟ್ ಟಿ20 ಕ್ಯಾಪ್ಟನ್ಸಿಯನ್ನು ಸ್ವ ಇಚ್ಛೆಯಿಂದ ಬಿಟ್ಟುಕೊಟ್ರೆ, ಏಕದಿನ ಕ್ಯಾಪ್ಟನ್ಸಿಯನ್ನು ಬಿಸಿಸಿಐ ವಿರಾಟ್ ಕೈಯಿಂದ ಕಿತ್ತುಕೊಂಡಿದೆ.
ಏಕದಿನ ನಾಯಕತ್ವ ವಿರಾಟ್ ಕೈತಪ್ಪಿದ ನಂತರ ಅಚ್ಚರಿ ಮೂಡಿಸುವ ಮಾಹಿತಿಗಳು ಹೊರಬೀಳುತ್ತಿವೆ. ಏಕದಿನ ಮತ್ತು ಟಿ20ಯ ಹೊಸ ನಾಯಕ ರೋಹಿತ್ ಶರ್ಮಾ ಬಿಸಿಸಿಐ ಮುಂದೆ ಡಿಮ್ಯಾಂಡ್ ಇಟ್ಟು ಅದನ್ನು ಈಡೇರಿಸಿಕೊಂಡಿದ್ದಾರೆ ಅನ್ನುವ ವಿಶ್ಲೇಷಣೆ ನಡೆಯುತ್ತಿದೆ. ರೋಹಿತ್, ಟಿ20 ನಾಯಕತ್ವವನ್ನು ವಹಿಸಿಕೊಳ್ಳುವ ಮೊದಲೇ, ಏಕದಿನ ಪಂದ್ಯದ ನಾಯಕತ್ವ ಕೊಟ್ಟರೆ ಮಾತ್ರ ನಾಯಕನಾಗುವ ಹಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಬಿಸಿಸಿಐಯನ್ನು ಕೂಡ ಇಕ್ಕಟ್ಟಿಗೆ ಸಿಲುಕಿಸಿತ್ತು ಅನ್ನುವ ಮಾಹಿತಿ ಸಿಕ್ಕಿದೆ.
ಟಿ20 ವಿಶ್ವಕಪ್ಗೂ ಮುನ್ನ ವಿರಾಟ್ ಕೊಹ್ಲಿ ಟಿ20 ನಾಯಕತ್ವ ತೊರೆಯುವುದಾಗಿ ಘೋಷಿಸಿದ್ದರು. ಇದಾದ ಬಳಿಕ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಟಿ20 ನಾಯಕರನ್ನಾಗಿ ನೇಮಿಸಿತ್ತು. ಈ ವೇಳೆ ರೋಹಿತ್ ಶರ್ಮಾ ಏಕದಿನ ನಾಯಕತ್ವದ ಷರತ್ತನ್ನೂ ಆಯ್ಕೆಗಾರರ ಮುಂದೆ ಇಟ್ಟಿದ್ದರು. ಅತ್ತ 2022 ಟಿ20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್. ಎರಡನ್ನೂ ಗಮನದಲ್ಲಿಟ್ಟುಕೊಂಡ ಬಿಸಿಸಿಐ ಹೊಸ ನಾಯಕನ ಆಯ್ಕೆಗೆ ಹಿಂದೇಟು ಹಾಕಿತ್ತು. ಹೀಗಾಗಿ ರೋಹಿತ್ಗೆ ಕ್ಯಾಪ್ಟನ್ಸಿ ನೀಡುವುದು ಬಿಸಿಸಿಐಗೆ ಅನಿವಾರ್ಯವಾಯಿತು.