ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಈಗ ಮಿಂಚುತ್ತಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಸರಣಿ ಮೇಲೆ ಸರಣಿ ಗೆಲ್ಲುತ್ತಿದೆ ಭಾರತ. ರೋಹಿತ್ ಶರ್ಮಾ ಈಗ ಸೋಲಿಲ್ಲದ ನಾಯಕನಾಗಿ ಮೆರೆಯುತ್ತಿದ್ದಾರೆ. ಈ ಮಧ್ಯೆ ಶ್ರೀಲಂಕಾ ವಿರುದ್ಧ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರೋಹಿತ್ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
400 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ಕೀರ್ತಿ ರೋಹಿತ್ಗೆ ಸಿಗಲಿದೆ. ರೋಹಿತ್ ಇಲ್ಲಿ ತನಕ 44 ಟೆಸ್ಟ್, 230 ಏಕದಿನ ಹಾಗೂ 125 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೀಮ್ ಇಂಡಿಯಾ ಪರ 400 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ 9ನೇ ಕ್ರಿಕೆಟಿಗನಾಗಿ ರೋಹಿತ್ ದಾಖಲೆ ಬರೆಯಲಿದ್ದಾರೆ.
ಸಚಿನ್ ತೆಂಡುಲ್ಕರ್ 664 ಪಂದ್ಯಗಳನ್ನು ಆಡಿ ದಾಖಲೆ ಬರೆದಿದ್ದಾರೆ. ಮಾಜಿ ನಾಯಕ ಎಂ. ಎಸ್. ಧೋನಿ 538, ರಾಹುಲ್ ದ್ರಾವಿಡ್ 509 ಹಾಗೂ ವಿರಾಟ್ ಕೊಹ್ಲಿ 457 ಪಂದ್ಯಗಳನ್ನಾಡಿದ್ದಾರೆ. ಮೊಹಮ್ಮದ್ ಅಜರುದ್ದೀನ್ 433, ಸೌರವ್ ಗಂಗೂಲಿ 424, ಅನಿಲ್ಕುಂಬ್ಳೆ 403 ಹಾಗೂ ಯುವರಾಜ್ ಸಿಂಗ್ 402 ಪಂದ್ಯಗಳನ್ನಾಡಿದ್ದಾರೆ.