ಜರ್ಮನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರು ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಶ್ರೀಕಾಂತ್ 21-16, 21-23, 21-18 ರಿಂದ ಚೀನಾದ ಲು ಗೌಂಗ್ ಝು ವಿರುದ್ಧ ಒಂದು ಗಂಟೆ ಏಳು ನಿಮಿಷದ ಹೋರಾಟದಲ್ಲಿ ಜಯ ಸಾಧಿಸಿದರು.
ಮೊದಲ ಗೇಮ್ ನಲ್ಲಿ 10-10, 14-14 ರಿಂದ ಸಮಬಲ ಸಾಧಿಸಿದ್ದ ಪಂದ್ಯದಲ್ಲಿ ಶ್ರೀಕಾಂತ್ ಭರ್ಜರಿ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕಿದರು. ಅಲ್ಲದೆ ಸತತ ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಎರಡನೇ ಗೇಮ್ ನಲ್ಲಿ ಆಟಗಾರರು ಅಂಕಗಳನ್ನು ನೀಡಲಿಲ್ಲ. ಪರಿಣಾಮ ಕೊನೆಯವರೆಗೂ ಸಾಗಿದ ಜಿದ್ದಾಜಿದ್ದಿನ ಪಂದ್ಯದಲ್ಲಿ ಲು ಗೌಂಗ್ ಝು ಗೆಲುವಿನ ನಗೆ ಬೀರಿದರು.
ಮೂರನೇ ಹಾಗೂ ನಿರ್ಣಾಯಕ ಗೇಮ್ ನ ಮೊದಲಾವಧಿಯಲ್ಲಿ ಶ್ರೀಕಾಂತ್ ಮುನ್ನಡೆ ಸಾಧಿಸಿದರು. ಅಲ್ಲದೆ ಗೇಮ್ ನ್ನು 21-18 ರಿಂದ ಜಯ ಸಾಧಿಸಿದರು.
ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಸಾಧನೆ ಮಾಡಿರುವ ಸೈನಾ ನೆಹ್ವಾಲ್ 10-21, 15-21 ರಿಂದ ರಚನೋಕ್ ಇಂಟನಾನ್ ವಿರುದ್ಧ ನಿರಾಸೆ ಅನುಭವಿಸಿದರು.