Rohit Sharma – ವಿರಾಟ್ ಬಗ್ಗೆ ಯಾಕಿಷ್ಟು ಚರ್ಚೆ ? ಅರ್ಥನೇ ಆಗುತ್ತಿಲ್ಲ – ರೋಹಿತ್ ಶರ್ಮಾ

ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನೂರು ರನ್ ಗಳಿಂದ ಸೋತಿದೆ. ಹೀಗಾಗಿ ಮೂರು ಪಂದ್ಯಗಳ ಏಕದಿನ ಸರಣಿ ಈಗ 1-1ರಿಂದ ಸಮಗೊಂಡಿದೆ. ಹೀಗಾಗಿ ಮೂರನೇ ಏಕದಿನ ಪಂದ್ಯ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಮಹತ್ವವನ್ನು ಪಡೆದುಕೊಂಡಿದೆ.
ಆದ್ರೆ ಟೀಮ್ ಇಂಡಿಯಾ ಸೋತಿರುವ ಬಗ್ಗೆ ಯಾರು ಪ್ರಶ್ನೆ ಮಾಡುತ್ತಿಲ್ಲ. ಬದಲಾಗಿ ಕೇಳುತ್ತಿರುವುದು ಒಂದೇ ಪ್ರಶ್ನೆ ವಿರಾಟ್ ಫಾರ್ಮ್ ಯಾಕೆ ಹಿಂಗಾಗಿದೆ ಎಂದು.
ನಿಮಗೆ ನೆನಪಿರಬಹುದು.. ರಾಜಮೌಳಿ ಅವರ ಬಾಹುಬಲಿ ಭಾಗ -1ರಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎಂಬ ಪ್ರಶ್ನೆಗೆ ಉತ್ತರ ನೀಡಲು ಒಂದೆರಡು ವರ್ಷ ತೆಗೆದುಕೊಂಡ್ರು. ಜನರಿಗೆ ಒಂದು ಕುತೂಹಲವಿತ್ತು. ಅದೇ ರೀತಿ ಈಗ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆಯೂ ಪ್ರಶ್ನೆಗಳು ಕೇಳಿಬರುತ್ತಲ್ಲೇ ಇವೆ. ಇದಕ್ಕೆ ಉತ್ತರ ಕೊಡಬೇಕಾದವರು ವಿರಾಟ್ ಕೊಹ್ಲಿಯೇ. ಅದು ಯಾವಾಗ ಅಂತ ಗೊತ್ತಿಲ್ಲ.

ಇದೀಗ ಎರಡನೇ ಏಕದಿನ ಪಂದ್ಯದ ನಂತರ ಸುದ್ದಿಗೊಷ್ಠಿಯಲ್ಲಿ ರೋಹಿತ್ ಶರ್ಮಾ ಸ್ವಲ್ಪ ಸಿಟ್ಟುಗೊಂಡಿದ್ದರು. ಕಾರಣ ವಿರಾಟ್ ಕೊಹ್ಲಿಯವರ ಕಳಪೆ ಫಾರ್ಮ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆ.
ವಿರಾಟ್ ಕೊಹ್ಲಿಯವರ ಬಗ್ಗೆ ಯಾಕೆ ಇಷ್ಟು ಚರ್ಚೆ ಮಾಡುತ್ತೀರಿ. ನನಗೆ ಒಂಚೂರು ಅರ್ಥವಾಗುತ್ತಿಲ್ಲ. ಮುಂದುವರಿಸಿ ಎಂದು ರೋಹಿತ್ ಶರ್ಮಾ ಸುದ್ದಿಗೋಷ್ಠಿಯಲ್ಲಿ ಮಾತು ಆರಂಭಿಸಿದ್ರು.
ಕೆಟ್ಟ ಫಾರ್ಮ್ ನಿಂದಾಗಿ ವಿರಾಟ್ ಕೊಹ್ಲಿಯವರ ಕ್ಯಾಲಿಬರ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕೋಚ್, ಕ್ಯಾಪ್ಟನ್ ಮತ್ತು ಕೋಚಿಂಗ್ ಸ್ಟಾಫ್ ನಿಂದ ವಿರಾಟ್ ಅವರಿಗೆ ಧೈರ್ಯವನ್ನು ತುಂಬುವ ಅಗತ್ಯವಿದೆಯೇ ಅಥವಾ ಅವರನ್ನು ಒಂಟಿಯಾಗಿರಿಸುವುದು ಉತ್ತಮವೇ ಎಂಬುದಕ್ಕೆ ರೋಹಿತ್ ಉತ್ತರಿಸಿದ್ದು ಹೀಗೆ..

ವಿರಾಟ್ ಕೊಹ್ಲಿ ಸುಮಾರು ವರ್ಷಗಳಿಂದ ಸುಮಾರು ಪಂದ್ಯಗಳನ್ನು ಆಡಿದ್ದಾರೆ. ವಿರಾಟ್ ಅದ್ಭುತ ಬ್ಯಾಟ್ಸ್ ಮೆನ್. ಅವರಿಗೆ ಯಾರು ಕೂಡ ಭರವಸೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ರು.
ನಾನು ಕಳೆದ ಸುದ್ದಿಗೋಷ್ಠಿಯಲ್ಲೂ ಹೇಳಿದ್ದೆ. ಪ್ರತಿಯೊಬ್ಬ ಆಟಗಾರನ ಬದುಕಿನಲ್ಲೂ ಏರಿಳಿತಗಳು ಇರುತ್ತವೆ. ನಾನು ಒಬ್ಬ ಆಟಗಾರನಾಗಿ ಹೇಳುತ್ತೇನೆ. ವಿರಾಟ್ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಹೀಗಾಗಿ ಒಂದೆರಡು ಪಂದ್ಯಗಳಲ್ಲಿ ಅವರಿಗೆ ಫಾರ್ಮ್ ಕಂಡುಕೊಳ್ಳಲು ಸಾಧ್ಯ. ಇದನ್ನೇ ನಾನು ನಂಬುತ್ತೇನೆ. ಉಳಿದವರು ಅದನ್ನೇ ತಿಳಿದುಕೊಂಡಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಸದ್ಯ ವಿರಾಟ್ ಕೊಹ್ಲಿಯವರ ಫಾರ್ಮ್ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ರೆ ಒಂದು ನೆನಪಿಡಿ. ಆಟಗಾರನ ಪ್ರದರ್ಶನ ಕುಂಠಿತವಾಗಬಹುದು. ಆದ್ರೆ ಗುಣಮಟ್ಟ ಯಾವತ್ತೂ ಕಳಪೆಯಾಗುವುದಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕೇ. ವಿರಾಟ್ ಕೊಹ್ಲಿ ಅನೇಕ ಶತಕಗಳನ್ನು ಸಿಡಿಸಿದ್ದಾರೆ. ಅವರ ಸರಾಸರಿಯನ್ನು ನೋಡಿ. ಅವರು ಅನುಭವಿ ಆಟಗಾರ. ಪ್ರತಿಯೊಬ್ಬ ಆಟಗಾರನಿಗೂ ಕೆಟ್ಟ ಪಂದ್ಯಗಳೂ ಇರುತ್ತವೆ. ಪ್ರತಿಯೊಂದು ಪಂದ್ಯದಲ್ಲೂ ರನ್ ಗಳಿಸುವ ಆಟಗಾರ ಯಾರು ಇಲ್ಲ. ವೈಯಕ್ತಿಕ ಬದುಕಿನಲ್ಲಿ ಏರಿಳಿತಗಳು ಸಹಜ ಎಂದು ರೋಹಿತ್ ಶರ್ಮಾ ಮತ್ತೊಮ್ಮೆ ವಿರಾಟ್ ಕೊಹ್ಲಿಯವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.