Babar Azam – ಕೆಟ್ಟ ಸಮಯ ಮುಗಿದು ಹೋಗುತ್ತೆ.. ಧೈರ್ಯವಾಗಿರು..!

ವಿರಾಟ್ ಕೊಹ್ಲಿ ಬ್ಯಾಟ್ ನಿಂದ ರನ್ ಹರಿದು ಬರುತ್ತಿಲ್ಲ. ಕ್ರೀಸ್ ನಲ್ಲಿ ಹೆಚ್ಚು ಸಮಯ ನಿಲ್ಲುತ್ತಿಲ್ಲ. ಆದ್ರೆ ಆಟದ ಗುಣಮಟ್ಟ ಕಮ್ಮಿಯಾಗಿಲ್ಲ. ಆದ್ರೂ ವಿರಾಟ್ ಕೊಹ್ಲಿ ಬಗ್ಗೆ ಟೀಕೆ ಮಾಡುವುದು ತಪ್ಪುತ್ತಿಲ್ಲ. ಮಾಜಿ ಕ್ರಿಕೆಟಿಗರಿಂದ ಹಿಡಿದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ವಿರಾಟ್ ಕೊಹ್ಲಿಯವರ ಕಳಪೆ ಫಾರ್ಮ್ ಬಗ್ಗೆಯೇ ಚರ್ಚೆ ನಡೆಸುತ್ತಿದ್ದಾರೆ.
ಹೌದು, ಹೆಂಗಿದ್ದ ಆಟಗಾರ ಯಾಕೆ ಹಿಂಗಾದ.. ಎದುರಾಳಿ ಬೌಲರ್ ಗಳ ವಿರುದ್ಧ ಪ್ರಹಾರ ನಡೆಸುತ್ತಾ ರನ್ ಮೇಷಿನ್ ಅಂತನೇ ಖ್ಯಾತಿ ಪಡೆದಿರುವ ವಿರಾಟ್ ಬ್ಯಾಟ್ ಈಗ ಯಾಕೆ ಸೈಲೆಂಟ್ ಆಗಿದೆ ? ಮೈದಾನದಲ್ಲಿ ವಾಲೈಂಟ್ ಆಗಿಯೇ ಬ್ಯಾಟ್ ಬೀಸುವ ಆಧುನಿಕ ಕ್ರಿಕೆಟ್ ನ ಮಾಸ್ಟರ್ ಈಗ ಯಾಕೆ ಕುಗ್ಗಿ ಹೋಗಿರುವುದು ? ಈ ಪ್ರಶ್ನೆಗಳಿಗೆ ಉತ್ತರ ವಿರಾಟ್ ಬಳಿಯಲ್ಲೇ ಇಲ್ಲ. ಅದಕ್ಕಾಗಿಯೇ ಅವರು ಮೌನವಾಗಿದ್ದಾರೆ. ಆದ್ರೂ ಮತ್ತೆ ಎದ್ದು ಬರುತ್ತೇನೆ ಎಂಬ ಅಚಲ ವಿಶ್ವಾಸವಂತೂ ಅವರಲ್ಲಿದೆ.
ಹೌದು, ವಿರಾಟ್ ಕೊಹ್ಲಿ ಶತಕ ದಾಖಲಿಸದೇ ಆಲ್ ಮೋಸ್ಟ್ 31 ತಿಂಗಳು ಕಳೆದಿವೆ. 2019ರಿಂದ ವಿರಾಟ್ ಆರ್ಭಟ ವಿಶ್ವ ಕ್ರಿಕೆಟ್ ನಲ್ಲಿ ನಡೆಯುತ್ತಿಲ್ಲ. ಹೀಗಾಗಿ ವಿರಾಟ್ ಸ್ಥಾನವನ್ನು ಪಕ್ಕದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಮ್ ಆಕ್ರಮಿಸಿಕೊಂಡಿದ್ದಾರೆ.

ಬಾಬರ್ ಅಝಮ್, ಸದ್ಯ ವಿಶ್ವ ಟಿ-20 ಮತ್ತು ಏಕದಿನ ಕ್ರಿಕೆಟ್ ನ ನಂಬರ್ ವನ್ ಬ್ಯಾಟ್ಸ್ ಮೆನ್. ಕೆಲವು ವರ್ಷಗಳ ಹಿಂದೆ ವಿರಾಟ್ ಯಾವ ರೀತಿ ಆಡುತ್ತಿದ್ರೋ ಅದೇ ರೀತಿ ಈಗ ಬಾಬರ್ ಅಝಮ್ ಆಡುತ್ತಿದ್ದಾರೆ. ಪಾಕ್ ತಂಡದ ಯಶಸ್ವಿ ನಾಯಕನಾಗಿಯೂ ಹೊರಹೊಮ್ಮುತ್ತಿದ್ದಾರೆ. ಹಾವು ಏಣಿ ಆಟದಂತೆ, ಕವಲು ದಾರಿಯಲ್ಲಿದ್ದ ಪಾಕ್ ಕ್ರಿಕೆಟ್ ತಂಡವನ್ನು ಸರಿ ದಾರಿಯಲ್ಲಿ ಮುನ್ನಡೆಸುತ್ತಿದ್ದಾರೆ.
ಇದೀಗ ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಮ್ ಅವರು ವಿರಾಟ್ ಕೊಹ್ಲಿಗೆ ಬೆಂಬಲವಾಗಿ ನಿಂತಿದ್ದಾರೆ.
ಮೈದಾನದಲ್ಲಿ ಬದ್ದ ವೈರಿ, ವಿಶ್ವ ಕ್ರಿಕೆಟ್ ನಲ್ಲಿ ಪ್ರತಿಸ್ಪರ್ಧಿಯಾದ್ರೂ ಒಬ್ಬ ಗೆಳೆಯನಂತೆ ಬಾಬರ್ ಅಝಮ್ ಅವರು ವಿರಾಟ್ ಕೊಹ್ಲಿಗೆ ಸ್ಥೈರ್ಯ ತುಂಬಿದ್ದಾರೆ.
ಕೆಟ್ಟ ಸಮಯ ಮುಗಿದು ಹೋಗುತ್ತದೆ.. ಧೈರ್ಯವಾಗಿರು ಎಂದು ಬಾಬರ್ ಅಝಮ್ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಾಬರ್ ಅಝಮ್ ಅವರ ಈ ಹೇಳಿಕೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದುವೇ ಕ್ರೀಡೆಯ ವಿಶೇಷತೆ ಎಂದು ಬಣ್ಣಿಸಲಾಗುತ್ತಿದೆ.

ಒಂದಂತೂ ನಿಜ, ವಿರಾಟ್ ಕೊಹ್ಲಿಗೆ ಸಾಲು ಸಾಲು ಅವಕಾಶಗಳನ್ನು ನೀಡಲಾಗುತ್ತಿದೆ. ಜೊತೆಗೆ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ರೂ ಮಾನಸಿಕವಾಗಿ ಕೊಹ್ಲಿ ಕುಗ್ಗಿ ಹೋಗಿದ್ದಾರೆ. ಅವರ ಆಟದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರತಿ ಹೊಡೆತಗಳಲ್ಲೂ ಕ್ಲಾಸ್ ಮತ್ತು ಮಾಸ್ ಆಟದ ಸ್ಪರ್ಶವಿದೆ. ಫಿಟ್ ನೆಸ್ ಮತ್ತು ಗುಣಮಟ್ಟದಲ್ಲೂ ತೊಂದರೆ ಇಲ್ಲ. ಆದ್ರೂ ವಿರಾಟ್ ಕೊಹ್ಲಿಗೆ ಏನಾಗಿದೆ ಎಂಬುದು ಆ ಪರಮಾತ್ಮನಿಗೆ ಗೊತ್ತು.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲೇಬೇಕು. ಮುಂದಿನ 2022ರ ಟಿ-20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿಯವರ ಆಟ ಮತ್ತು ಅನುಭವ ಟೀಮ್ ಇಂಡಿಯಾಗೆ ಅಗತ್ಯ ಇದೆ. ಮೇಲ್ನೋಟಕ್ಕೆ ಹೇಳಬಹುದು, ವಿರಾಟ್ ಜಾಗವನ್ನು ತುಂಬುವಂತಹ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು.
ಆದ್ರೆ ವಿರಾಟ್ ಜಾಗವನ್ನು ತುಂಬುವುದು ಅಷ್ಟೊಂದು ಇಝಿಯಲ್ಲ. ಯಾಕಂದ್ರೆ ವಿರಾಟ್ ಕೊಹ್ಲಿಯ ಆಟಕ್ಕೆ ಸರಿಸಾಟಿ ವಿರಾಟ್ ಕೊಹ್ಲಿಯೇ ಎಂಬುದನ್ನು ಒಪ್ಪಿಕೊಳ್ಳಲೇಬೇಕು.