ಇಂಗ್ಲೆಂಡ್(England) ವಿರುದ್ಧ ಮೊದಲ ODI ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ (Rohit Sharma) ತಮ್ಮ ಮಾನವೀಯ ಗುಣದ ಮೂಲಕ ಇಂಗ್ಲೆಂಡ್ ಕ್ರಿಕೆಟ್ ಫ್ಯಾನ್ಸ್‌ಗಳ ಮನಗೆದ್ದಿದ್ದಾರೆ.

ಲಂಡನ್‌ನ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 110 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಟೀಂ ಇಂಡಿಯಾಕ್ಕೆ (Team India) ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಅದ್ಭುತ ಆಟದ ಮೂಲಕ ಗೆಲುವು ತಂದುಕೊಟ್ಟರು. ಆಂಗ್ಲರ ಬೌಲಿಂಗ್ ಪಡೆಯನ್ನ ಧೂಳಿಪಟ ಮಾಡಿದ ಹಿಟ್ ಮ್ಯಾನ್, ಬೌಂಡರಿ ಹಾಗೂ ಸಿಕ್ಸರ್‌ಗಳಿಂದ ಅರ್ಧಶತಕ ಸಿಡಿಸಿ ಮಿಂಚಿದರು. ರೋಹಿತ್ ಹಾಗೂ ಧವನ್ ಜೋಡಿ 114 ರನ್‌ಗಳ ಜೊತೆಯಾಟದಿಂದ ತಂಡಕ್ಕೆ 10 ವಿಕೆಟ್‌ಗಳ ಗೆಲುವು ನೀಡಿದರು.
ಭಾರತದ ಬ್ಯಾಟಿಂಗ್ ವೇಳೆ ಇನ್ನಿಂಗ್ಸ್‌ನ 5ನೇ ಓವರ್‌ನಲ್ಲಿ ಡೇವಿಡ್ ವಿಲ್ಲಿ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ, ಲೆಗ್ ಸೈಡ್‌ನತ್ತ ಸಿಡಿಸಿದ ಸಿಕ್ಸರ್ ಸಿಡಿಸಿದರು. ಟೀಂ ಇಂಡಿಯಾ ನಾಯಕ ಸಿಕ್ಸರ್ ಸಿಡಿಸಿದ ವೇಳೆ ಚೆಂಡು, ಸ್ಟೇಡಿಯಂನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ 6 ವರ್ಷದ ಬಾಲಕಿಗೆ ಬಡಿದಿತ್ತು. ಈ ವೇಳೆ ಕಾಂಮೆಟರಿ ಮಾಡುತ್ತಿದ್ದ ರವಿಶಾಸ್ತ್ರಿ ಹಾಗೂ ಮೈಕಲ್ ಅರ್ಥಟನ್ ಇದರ ಬಗ್ಗೆ ಪ್ರತಿಕ್ರಿಯಿಸಿದ್ದರು. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಹ ಇದನ್ನ ಗಮನಿಸಿದ್ದರು.
ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಬಾಲಕಿಗೆ ಚೆಂಡು ಬಡಿಯುತ್ತಿದ್ದಂತೆ ಇಂಗ್ಲೆಂಡ್ ತಂಡದ ವೈದ್ಯಕೀಯ ಸಿಬ್ಬಂದಿ, ಬಾಲಕಿಯತ್ತ ತೆರಳಿ ಆಕೆಗೆ ಆಗಿರುವ ತೊಂದರೆ ಗಮನಿಸಿದ್ದರು. ಈ ನಡುವೆ ಪಂದ್ಯ ಮುಕ್ತಾಯದ ಬಳಿಕ ರೋಹಿತ್ ಶರ್ಮಾ, ಬಾಲಕಿಯನ್ನ ಭೇಟಿಯಾಗಿ ಆಕೆಯ ಯೋಗಕ್ಷೇಮ ವಿಚಾರಿಸಿದರು. ಟೀಂ ಇಂಡಿಯಾ ನಾಯಕನ ಈ ನಡೆ ಇಂಗ್ಲೆಂಡ್ ಪ್ರೇಕ್ಷಕರ ಮನಗೆದ್ದಿತು. ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ 1-0 ಮುನ್ನಡೆ ಸಾಧಿಸಿದ್ದು, ಉಭಯ ತಂಡಗಳ ನಡುವಿನ 2ನೇ ಪಂದ್ಯ ಜು.14ರಂದು ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆಯಲಿದೆ.