Rishab Pant – ಕ್ರಿಕೆಟ್ ಬ್ರಹ್ಮಾಂಡದ ಅಪರೂಪದ ಪ್ರತಿಭೆ ರಿಷಬ್ ಪಂತ್..!

ರಿಷಬ್ ಪಂತ್.. ವಿಚಿತ್ರ ಮನಸ್ಥಿತಿಯ ಆಟಗಾರ. ಕೆಲವೊಮ್ಮೆ ಪಂತ್ ಆಟ ನೋಡಿದಾಗ ಟೀಕೆ ಮಾಡಬಹುದು. ಯಾಕಪ್ಪ ತಂಡದಲ್ಲಿದ್ದಾನೆ ಎಂದು ಕೂಡ ಅನ್ನಿಸುತ್ತದೆ. ಆದ್ರೆ ರಿಷಬ್ ಪಂತ್ ಅವರ ಶಾಟ್ಸ್ ಗಳನ್ನು ನೋಡಿದಾಗ ಅದ್ಭುತ ಎಂದು ಬಣ್ಣಿಸಲು ಕೂಡ ಮರೆಯುವುದಿಲ್ಲ. ಬ್ಯಾಟಿಂಗ್ ಮಾಡುತ್ತಿರುವಾಗ ಎದೆ ಬಡಿತ ಜೋರಾಗುವಂತೆ ಮಾಡುತ್ತಾರೆ ರಿಷಬ್ ಪಂತ್. ಹಾಗಂತ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಈಗಾಗಲೇ ಹೇಳಿದ್ದಾರೆ. ಇದಕ್ಕೆ ಈಗ ಹಾರ್ದಿಕ್ ಪಾಂಡ್ಯ ಕೂಡ ಧ್ವನಿ ಸೇರಿಸಿದ್ದಾರೆ.

ಹೌದು, ತಂಡ ಅಗತ್ಯ ಬಿದ್ದಾಗ ಮಿಂಚಿನಂತೆ ಬ್ಯಾಟಿಂಗ್ ಮಾಡುವುದು ಗೊತ್ತು. ಕೆಟ್ಟ ಹೊಡೆತಗಳಿಗೆ ವಿಕೆಟ್ ಕೈಚೆಲ್ಲುವುದು ಗೊತ್ತಿದೆ. ಆದ್ರೆ ರಿಷಬ್ ಪಂತ್ ಒತ್ತಡಕ್ಕೆ ಸಿಲುಕುವುದು ತುಂಬಾ ಕಮ್ಮಿ. ಧೈರ್ಯದಿಂದಲೇ ಮುನ್ನುಗ್ಗಿ ಹೊಡೆಯುವ ತಾಕತ್ತು ಇದೆ.

ಕೆಲವೊಮ್ಮೆ ತಂಡದ ಹಿತಕ್ಕಿಂತ ತನ್ನ ನೈಜ ಬ್ಯಾಟಿಂಗ್ ಕಡೆಗೆ ಆದ್ಯತೆ ನೀಡ್ತಾರೆ. ಆದ್ರೆ ಕ್ರೀಸ್ ಗೆ ಅಂಟಿಕೊಂಡ್ರೆ ಮಾತ್ರ ತಂಡಕ್ಕೆ ಹಿತಾನುಭವವನ್ನು ನೀಡ್ತಾರೆ. ಇದು ರಿಷಬ್ ಪಂತ್ ಸ್ಪೆಷಾಲಿಟಿ. ಇದಕ್ಕಾಗಿ ಸೌರವ್ ಗಂಗೂಲಿ ಪಂತ್ ಗೆ ಟೀಮ್ ಇಂಡಿಯಾದ ಪಾಂಡು ಎಂದು ಕರೆದಿರುವುದು.

ಹಾಗೇ ನೋಡಿದ್ರೆ ಇಂಗ್ಲೆಂಡ್ ಪ್ರವಾಸದಲ್ಲಿ ರಿಷಬ್ ಪಂತ್ ಎರಡು ಶತಕಗಳನ್ನು ದಾಖಲಿಸಿದ್ದಾರೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಗಳಿಸಿದ್ದ ಶತಕಗಳು ಪಂತ್ ಅವರನ್ನು ಟೀಮ್ ಇಂಡಿಯಾದ ಭವಿಷ್ಯದ ಖಾಯಂ ಆಟಗಾರನ್ನನಾಗಿ ಮಾಡಿಸಿದೆ. ಆದ್ರೆ ಇದೇ ಆಟವನ್ನು ಮುಂದುವರಿಸಿಕೊಂಡು ಹೋಗಬೇಕಿದೆ.

ಅದಿರಲಿ, ಮೂರನೇ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಚೊಚ್ಚಲ ಶತಕವನ್ನು ಸಿಡಿಸಿದ್ದಾರೆ. ಆದ್ರೆ ಈ ಶತಕವನ್ನು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ಯಾಕಂದ್ರೆ ಸದ್ಯದ ವೈಟ್ ಬಾಲ್ ಕ್ರಿಕೆಟ್ ನಲ್ಲಿ ರಿಷಬ್ ಪಂತ್ ಅಷ್ಟೊಂದು ಫಾರ್ಮ್ ನಲ್ಲಿ ಕೂಡ ಇರಲಿಲ್ಲ.
ಆದ್ರೆ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದ ಪಂತ್ ಶತಕದ ಜೊತೆ ತಂಡವನ್ನು ಗೆಲುವಿನ ದಡ ಕೂಡ ಸೇರಿಸಿದ್ದಾರೆ.

ತಾಳ್ಮೆ ಮತ್ತು ಜವಾಬ್ದಾರಿಯನ್ನು ಅರಿತುಕೊಂಡು ಆಡಿದ್ದಾರೆ. ಇದಕ್ಕೆ ಹಾರ್ದಿಕ್ ಪಾಂಡ್ಯ ಕೂಡ ಸಾಥ್ ನೀಡಿದ್ದಾರೆ. ಪಂತ್ ಬ್ಯಾಟಿಂಗ್ ಮಾಡುತ್ತಿರುವಾಗ ಹಾರ್ದಿಕ್ ಪಾಂಡ್ಯ ಪ್ರತಿ ಎಸೆತಗಳಿಗೂ ಸಲಹೆಗಳನ್ನು ನೀಡುತ್ತಿದ್ದರು. ಪಂತ್ ಅವರ ಹೊಡೆತಗಳಿಗೆ ಪಾಂಡ್ಯ ಕೂಡ ಕೆಲವು ಬಾರಿ ಸಿಟ್ಟು ಮಾಡಿಕೊಳ್ಳುತ್ತಿದ್ದರು. ಆದ್ರೆ ಆ ಶಾಟ್ಸ್ ಅನ್ನು ನೋಡಿದ ನಂತರ ಸಣ್ಣ ನಗುವನ್ನು ಬೀರುತ್ತಿದ್ದರು.

ಅಂದ ಹಾಗೇ ರಿಷಬ್ ಪಂತ್ ಶತಕ ದಾಖಲಿಸುವ ಮುನ್ನ ಎರಡು ಜೀವದಾನಗಳನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಸ್ಟಂಪ್ ಔಟ್ ಮಾಡುವ ಅವಕಾಶವನ್ನು ಕೈಚೆಲ್ಲಿಕೊಂಡ್ರು. ಹಾಗೇ ಪಂತ್ ರನೌಟ್ ಆಗುವ ಸಾಧ್ಯತೆಯೂ ಇತ್ತು. ಅದನ್ನು ಬಿಟ್ರೆ ರಿಷಬ್ ಪಂತ್ ಅವರದ್ದು ಕಳಂಕ ರಹಿತ ಇನಿಂಗ್ಸ್ ಆಗಿತ್ತು.
ಇನ್ನು ರಿಷಬ್ ಪಂತ್ ಅವರ ಮ್ಯಾಚ್ ವಿನ್ನಿಂಗ್ ಆಟಕ್ಕೆ ನಾಯಕ ರೋಹಿತ್ ಶರ್ಮಾ ಫಿದಾ ಆಗಿಬಿಟ್ಟಿದ್ದಾರೆ.

ಶತಕ ದಾಖಲಿಸಿದ್ದ ನಂತರ ಇನ್ನೇನೂ ಗೆಲುವು ಸನೀಹದಲ್ಲಿದ್ದಾಗ ರಿಷಬ್ ಪಂತ್ ತನ್ನ ರಾಕ್ಷಸ ಪ್ರವೃತ್ತಿಯ ಆಟವನ್ನು ಇಂಗ್ಲೆಂಡ್ ಆಟಗಾರರಿಗೆ ತೋರಿಸಿದ್ರು. ಶಾಂತಚಿತ್ತತೆಯಿಂದ ಬ್ಯಾಟಿಂಗ್ ಮಾಡುತ್ತಿದ್ದ ಪಂತ್ 42ನೇ ಓವರ್ ನಲ್ಲಿ ರುದ್ರ ರೂಪವನ್ನೇ ತೋರಿಸಿದ್ರು. ಡೇವಿಡ್ ವಿಲ್ಲೆಯವರ ಐದು ಎಸೆತಗಳನ್ನು ಸತತವಾಗಿ ಬೌಂಡರಿ ಗೆರೆ ದಾಟಿಸಿದ್ರು.. ಬಳಿಕ ಗೆಲುವಿನ ರನ್ ಕೂಡ ಸೀಮಾ ರೇಖೆ ದಾಟಿಸಿದ್ದರು.

ಒಟ್ಟಿನಲ್ಲಿ ಆಧುನಿಕ ಕ್ರಿಕೆಟ್ ಬ್ರಹ್ಮಾಂಡದಲ್ಲಿ ರಿಷಬ್ ಪಂತ್ ನಂತಹ ಆಟಗಾರ ಮತ್ತೊಬ್ಬನಿಲ್ಲ. ಪಂತ್ ಸ್ಥಿರತೆ ಮತ್ತು ಜವಾಬ್ದಾರಿಯನ್ನು ಅರಿತುಕೊಂಡು ಆಡಿದ್ರೆ ಧೋನಿ, ವಿರಾಟ್ ಸಾಲಿಗೆ ಸೇರಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿಯೇ ರಿಷಬ್ ಪಂತ್ ಅವರನ್ನು ಭಾರತ ಕ್ರಿಕೆಟ್ ತಂಡದ ಆಸ್ತಿ ಎಂದು ಬಿಂಬಿಸುತ್ತಿರುವುದು.