Rishab Pant – ರವಿಶಾಸ್ತ್ರಿಗೆ ಶಾಂಪೇನ್ ಗಿಫ್ಟ್ ನೀಡಿದ ರಿಷಬ್ ಪಂತ್..!

ಇಂಗ್ಲೆಂಡ್ ವಿರುದ್ದದ ಮೂರನೇ ಏಕದಿನ ಪಂದ್ಯವನ್ನು ಟೀಮ್ ಇಂಡಿಯಾ ಐದು ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಏಕದಿನ ಸರಣಿಯನ್ನು ರೋಹಿತ್ ಬಳಗ 2-1ರಿಂದ ಗೆದ್ದುಕೊಂಡಿತ್ತು.
ಹಾಗೇ, ನೋಡಿದ್ರೆ ಟೀಮ್ ಇಂಡಿಯಾ ಆರಂಭದಲ್ಲಿ ಸೋಲಿನ ಭೀತಿಗೆ ಸಿಲುಕಿತ್ತು. ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅದ್ಭುತ ಇನಿಂಗ್ಸ್ ಕಟ್ಟಿದ್ದರು. ಅಲ್ಲದೆ ಶತಕದ ಜೊತೆಯಾಟವನ್ನು ಆಡಿದ್ರು. ಹಾರ್ದಿಕ್ ಪಾಂಡ್ಯ ಆಕರ್ಷಕ ಅರ್ಧಶತಕ ದಾಖಲಿಸಿ ಪೆವಿಲಿಯನ್ ಹಾದಿ ಹಿಡಿದಿದ್ರು.
ಇನ್ನೊಂದೆಡೆ ರಿಷಬ್ ಪಂತ್ ತಾಳ್ಮೆ ಕಳೆದುಕೊಳ್ಳದೇ, ಎಚ್ಚರಿಕೆಯ ಆಟವನ್ನು ಆಡಿದ್ರು. ಸಮಯೋಚಿತ ಆಟವನ್ನಾಡಿದ್ದ ರಿಷಬ್ ಪಂತ್ ಶತಕ ಕೂಡ ದಾಖಲಿಸಿದ್ರು. ಆದ್ರೆ ಶತಕದ ನಂತರ ರಿಷಬ್ ಪಂತ್ ಅವರ ಆಟದ ಖದರೇ ಬದಲಾಯ್ತು.
ಡೇವಿಡ್ ವಿಲ್ಲಿ ಅವರ ಒಂದೇ ಓವರ್ ನಲ್ಲಿ ಐದು ಬೌಂಡರಿ ಸಿಡಿಸಿದ್ರು. ಅಂತಿಮವಾಗಿ ಟೀಮ್ ಇಂಡಿಯಾ 43ನೇ ಓವರ್ ನಲ್ಲಿ ಗೆಲುವಿನ ನಗೆ ಬೀರಿತ್ತು.
ರಿಷಬ್ ಪಂತ್ ಅಜೇಯ 125 ರನ್ ದಾಖಲಿಸಿದ್ರು. ಏಕದಿನ ಕ್ರಿಕೆಟ್ ನಲ್ಲಿ ತನ್ನ ಚೊಚ್ಚಲ ಶತಕದ ಸಂಭ್ರಮವನ್ನು ಆಚರಿಸಿಕೊಂಡ್ರು. ಅಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದ್ರು.

ಈ ನಡುವೆ, ರಿಷಬ್ ಪಂತ್ ತನ್ನ ಮಾಜಿ ಕೋಚ್ ರವಿಶಾಸ್ತ್ರಿ ಅವರಿಗೆ ವಿಶೇಷ ಗಿಫ್ಟ್ ಕೂಡ ನೀಡಿದ್ದರು. ಇದಕ್ಕೆ ಕಾರಣವೂ ಇದೆ. ರವಿಶಾಸ್ತ್ರಿ ಟೀಮ್ ಇಂಡಿಯಾದ ಕೋಚ್ ಆಗಿದ್ದಾಗ ರಿಷಬ್ ಪಂತ್ ಗೆ ಕೆಲವೊಂದು ಸಲಹೆಗಳನ್ನು ನೀಡಿದ್ದರು. ಪ್ರತಿ ಬಾರಿ ದೊಡ್ಡ ಹೊಡೆತಕ್ಕೆ ಮುಂದಾಗಬೇಕು. ಸಿಂಗಲ್ಸ್ ತೆಗೆದುಕೊಂಡು ಸ್ಟ್ರೈಕ್ ರೋಟೆಟ್ ಮಾಡಿಕೊಂಡು ಆಡು ಎಂದು. ಆದ್ರೆ ರಿಷಬ್ ಪಂತ್ ಈ ಸಲಹೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದ್ರೆ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರವಿಶಾಸ್ತ್ರಿ ಈ ಹಿಂದೆ ಹೇಳಿದ್ದ ಹಾಗೇ ಆಡಿದ್ರು. ಅಲ್ಲದೆ ದೊಡ್ಡ ಮೊತ್ತದ ರನ್ ಗಳಿಸುವಲ್ಲಿ ಕೂಡ ಯಶಸ್ವಿಯಾದ್ರು.
ಇನ್ನು ರಿಷಬ್ ಪಂತ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಜೊತೆ ಇಂಗ್ಲೀಷ್ ಸಾಂಪ್ರದಾಯದಂತೆ ಶಾಂಪೇನ್ ಉಡುಗೊರೆಯಾಗಿ ನೀಡುವುದು ಅಲ್ಲಿನ ವಾಡಿಕೆ. ಹಾಗೇ ರಿಷಬ್ ಪಂತ್ ಗೆ ಪಂದ್ಯದ ಶ್ರೇಷ್ಠ ಪ್ರಶಸ್ತಿಯ ಜೊತೆಗೆ ಶಾಂಪೇನ್ ಕೂಡ ಸಿಕ್ಕಿತ್ತು.
https://twitter.com/tejrsalian/status/1548732542362296327?ref_src=twsrc%5Etfw%7Ctwcamp%5Etweetembed%7Ctwterm%5E1548732542362296327%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fsports
ಈ ಪ್ರಶಸ್ತಿ ತೆಗೆದುಕೊಂಡು ಹಿಂತಿರುಗುವಾಗ ರಿಷಬ್ ಪಂತ್ ಅವರಿಗೆ ಮೈದಾನದಲ್ಲಿ ರವಿಶಾಸ್ತ್ರಿ ಸಿಕ್ಕಿದ್ದರು. ರವಿಶಾಸ್ತ್ರಿ ಅವರು ಸ್ಕೈ ಸ್ಪೋಟ್ರ್ಸ್ ಗೆ ಪಂದ್ಯದ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದರು. ಆಗ ತನ್ನತ್ತ ಬಂದಿದ್ದ ರಿಷಬ್ ಪಂತ್ ಅವರನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದ್ರು. ಈ ವೇಳೆ ತನ್ನ ಕೈಯಲ್ಲಿದ್ದ ಶಾಂಪೇನ್ ಬಾಟಲ್ ಅನ್ನು ರವಿಶಾಸ್ತ್ರಿ ಅವರಿಗೆ ಗಿಫ್ಟ್ ಆಗಿ ನೀಡಿದ್ರು. ಆಗ ಮೈದಾನದಲ್ಲಿದ್ದ ಪ್ರೇಕ್ಷಕರ ಚೀರಾಟ ಮುಗಿಲು ಮುಟ್ಟಿತ್ತು. ಇದೀಗ ಈ ವಿಡಿಯೋ ಕೂಡ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ರವಿಶಾಸ್ತ್ರಿಗೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಶಾಂಪೇನ್ ಬಾಟಲ್ ಅನ್ನು ಗಿಫ್ಟ್ ನೀಡಿದ್ರು. ಆದ್ರೆ ರವಿಶಾಸ್ತ್ರಿ ಈ ಶಾಂಪೇನ್ ಬಾಟಲ್ ಅನ್ನು ತೆಗೆದುಕೊಂಡು ಮತ್ತೆ ವಿರಾಟ್ ಗೆ ಹಸ್ತಾಂತರಿಸಿದ್ರು.
ಒಟ್ಟಿನಲ್ಲಿ ಮಾಜಿ ಗುರುವಿಗೆ ಶಿಷ್ಯರಿಬ್ಬರು ಶಾಂಪೇನ್ ಬಾಟಲ್ ನೀಡಿ ಎಲ್ಲರ ಗಮನ ಸೆಳೆದ್ರು.