Rishab Pant – ಕೋಟ್ಯಾಧಿಶನಾಗಬಹುದು.. ಅಖ್ತರ್ ಹೇಳುವುದು ಹೀಗೆ..!

ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅವರದ್ದೇ ಸುದ್ದಿ.. ಎಲ್ಲರ ಬಾಯಲ್ಲೂ ರಿಷಬ್ ಹೆಸರು ನಲಿದಾಡುತ್ತಿದೆ. ಪ್ರತಿ ಮನೆ ಮನೆಗೂ ರಿಷಬ್ ಪಂತ್ ಮನೆ ಮಾತಾಗಿರುವ ಕ್ರಿಕೆಟಿಗ.
ಹೌದು, ತನ್ನ ಸ್ಪೋಟಕ ಆಟದಿಂದಲೇ ಗಮನ ಸೆಳೆಯುತ್ತಿರುವ ರಿಷಬ್ ಪಂತ್ ಸದ್ಯದ ಮಟ್ಟಿಗೆ ಪ್ರಬುದ್ದ ಕ್ರಿಕೆಟಿಗನಾಗಿ ಹೊರಹೊಮ್ಮುತ್ತಿದ್ದಾರೆ.
ಅದರಲ್ಲೂ ವಿದೇಶಿ ನೆಲದಲ್ಲಿ ಆರ್ಭಟಿಸುತ್ತಿರುವ ರಿಷಬ್ ಪಂತ್ ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ವಿಶ್ವದ ಶ್ರೇಷ್ಠ ತಂಡಗಳಾಗಿರುವ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ವಿರುದ್ಧ ಅದ್ಭುತವಾಗಿ ಆಡಿ ಗಮನ ಸೆಳೆದಿದ್ದಾರೆ. ಅದರಲ್ಲೂ ಇಂಗ್ಲೆಂಡ್ ನಲ್ಲಿ ನಡೆದಿದ್ದ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಶತಕ ದಾಖಲಿಸಿರುವುದು ರಿಷಬ್ ಪಂತ್ ಅವರನ್ನು ವಿಶ್ವದ ಸೂಪರ್ ಸ್ಟಾರ್ ಆಟಗಾರರನ್ನಾಗಿ ಮಾಡಿದೆ.
ಅಂದ ಮೇಲೆ ಜಾಹಿರಾತು ಕಂಪೆನಿಗಳು ರಿಷಬ್ ಪಂತ್ ಮೇಲೆ ಮುಗಿಬೀಳುವುದರಲ್ಲಿ ತಪ್ಪೇನೂ ಇಲ್ಲ. ಈಗಾಗಲೇ ಐಸಿಸಿ ಮುಂಬರುವ ಟಿ-20 ವಿಶ್ವಕಪ್ ಟೂರ್ನಿಗೆ ರಿಷಬ್ ಪಂತ್ ಅವರನ್ನೇ ಪ್ರಮುಖ ರಾಯಭಾರಿಯನ್ನಾಗಿ ಮಾಡಿಕೊಂಡಿದೆ. ಈಗಾಗಲೇ ಐಸಿಸಿ ಪ್ರೋಮೊದಲ್ಲಿ ರಿಷಬ್ ಪಂತ್ ಸಿಡ್ನಿ ಹಾರ್ಬರ್ ನಲ್ಲಿ ಎದೆಯೆತ್ತರ ನೀರಿನಲ್ಲಿ ನಡೆದಾಡಿಕೊಂಡು ನಗರವನ್ನು ಪ್ರವೇಶಿಸುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.

ಜಾಹಿರಾತು ಕಂಪೆನಿಗಳ ಕಣ್ಮನಿಯಾಗಿರುವ ಪಂತ್ ಈಗಾಗಲೇ ಹಲವು ಕಂಪೆನಿಗಳ ಬ್ರ್ಯಾಂಡ್ ಆಂಬಾಸಿಡರ್ ಕೂಡ ಆಗಿದ್ದಾರೆ.
ಈ ನಡುವೆ, ಪಾಕಿಸ್ತಾನದ ವೇಗಿ ಶೋಯಿಬ್ ಅಖ್ತರ್ ಅವರು ರಿಷಬ್ ಪಂತ್ ಅವರಿಗೆ ಸಲಹೆಯೊಂದನ್ನು ಕೊಟ್ಟಿದ್ದಾರೆ.
ರಿಷಬ್ ಪಂತ್ ಕ್ರಿಕೆಟ್ ಆಟವನ್ನು ಬಿಟ್ಟು ಮಾಡೆಲ್ ಆಗಿಯು ಕೋಟಿ ಕೋಟಿ ಹಣವನ್ನು ಸಂಪಾದಿಸಬಹುದು ಎಂದು ಅಖ್ತರ್ ಹೇಳಿದ್ದಾರೆ.

ಭಾರತದ ಮಾರುಕಟ್ಟೆಯ ವಿಸ್ತಾರ ದೊಡ್ಡದಿದೆ. ಸೂಪರ್ ಸ್ಟಾರ್ ಆಗಿ ಹೊರಹೊಮ್ಮುತ್ತಿರುವ ರಿಷಬ್ ಪಂತ್ ಮೇಲೆ ದುಡ್ಡು ಸುರಿಯಲು ಜಾಹಿರಾತು ಕಂಪೆನಿಗಳು ಹಿಂದೆ ಮುಂದೆ ನೋಡುವುದಿಲ್ಲ. ಆದ್ರೆ ರಿಷಬ್ ಪಂತ್ ಈ ಒಂದು ವಿಚಾರದಲ್ಲಿ ಸ್ವಲ್ಪ ಯೋಚನೆ ಮಾಡಬೇಕು. ನನ್ನ ಪ್ರಕಾರ ರಿಷಬ್ ಪಂತ್ ಹೆಚ್ಚು ದಪ್ಪ ಇದ್ದಾರೆ. ಅದು ಅವರಿಗೆ ಗೊತ್ತು. ಫಿಟ್ ಆಂಡ್ ಫೈನ್ ಆಗಿ ಕಾಣಿಸಿದ್ರೆ ರಿಷಬ್ ಪಂತ್ ಮೈದಾನದ ಹೊರಗಡೆ ಕೋಟಿ ಕೋಟಿ ಹಣವನ್ನು ಗಳಿಸಬಹುದು ಎಂದು ಹೇಳಿದ್ದಾರೆ.
ಹಾಗಂತ ಭಾರತದಲ್ಲಿ ಕ್ರಿಕೆಟ್ ಆಟಗಾರರ ಮೇಲೆ ಬಂಡವಾಳ ಹೂಡುವುದು ಇದೇನೂ ಮೊದಲಲ್ಲ. ಈ ಹಿಂದೆ ಸಚಿನ್ ತೆಂಡುಲ್ಕರ್, ನಂತರ ಮಹೇಂದ್ರ ಸಿಂಗ್ ಧೋನಿ, ಬಳಿಕ ವಿರಾಟ್ ಕೊಹ್ಲಿ.. ಈಗ ರಿಷಬ್ ಪಂತ್ ಜಾಹಿರಾತು ಲೋಕದ ಕಣ್ಮನಿಯಾಗುತ್ತಿದ್ದಾರೆ.