ರಿಕಿ ಪಾಂಟಿಂಗ್… ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ. ಸದ್ಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್. ಓರ್ವ ಆಟಗಾರನಾಗಿ, ನಾಯಕನಾಗಿ, ತರಬೇತುದಾರನಾಗಿ ರಿಕಿ ಪಾಂಟಿಂಗ್ ಸೈ ಎನಿಸಿಕೊಂಡಿದ್ದಾರೆ. ಇದೀಗ ರಿಕಿ ಪಾಂಟಿಂಗ್ ಅಚ್ಚರಿಯ ಎರಡು ಹೇಳಿಕೆಗಳನ್ನು ನೀಡಿದ್ದಾರೆ.
ಮುಖ್ಯವಾಗಿ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಗೆ ತನ್ನನ್ನು ನಿವೇದನೆ ಮಾಡಿಕೊಂಡಿದ್ದರು. ಆದ್ರೆ ನಾನು ನಿರಾಕರಿಸಿದ್ದೆ. ಯಾಕಂದ್ರೆ ನನಗೆ ತನ್ನ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಬೇಕಾಗಿತ್ತು. ನನ್ನ ಮಗನಿಗೆ ಈಗ ಏಳು ವರ್ಷ. ವರ್ಷದ 300 ದಿನಗಳ ಕಾಲ ಕುಟುಂಬವನ್ನು ಬಿಟ್ಟು ಇರೋಕೆ ಸಾಧ್ಯನೇ ಇಲ್ಲ. ಹಾಗಾಗಿ ನಾನು ಟೀಮ್ ಇಂಡಿಯಾದ ಕೋಚ್ ಹುದ್ದೆಗೇರಲು ಮನಸು ಮಾಡಲಿಲ್ಲ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
ಆದ್ರೆ ರಿಕಿ ಪಾಂಟಿಂಗ್ ಅವರಿಗೆ ಬಿಸಿಸಿಐನಿಂದ ಯಾರು ಆಫರ್ ಮಾಡಿದ್ದರು ಎಂಬುದನ್ನು ಹೇಳಲಿಲ್ಲ. ಕಳೆದ ಐಪಿಎಲ್ ವೇಳೆ ಟೀಮ್ ಇಂಡಿಯಾದ Pಕೋಚ್ ಹುದ್ದೆಗೇರುವಂತೆ ಕೆಲವರು ನನ್ನ ಬಳಿ ಕೇಳಿಕೊಂಡಿದ್ದರು ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
ಇನ್ನೊಂದು ಕಡೆ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿರೋದು ಅವರಿಗೆ ಅಚ್ಚರಿಯನ್ನುಂಟು ಮಾಡಿತ್ತಂತೆ. ರಾಹುಲ್ ದ್ರಾವಿಡ್ ಅವರಿಗೆ ಚಿಕ್ಕ ಮಕ್ಕಳಿದ್ದಾರೆ. ಕುಟುಂಬದಿಂದ ದೂರವೇ ಉಳಿಯಬೇಕಾದ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ. ಇದು ನನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
ಇನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದ ರಾಹುಲ್ ದ್ರಾವಿಡ್ ಜೊತೆ ನಾನು ಸಂವಾದ ನಡೆಸಿದ್ದೇನೆ. ದ್ರಾವಿಡ್ ಅವರು ಎನ್ ಸಿಎ ಮುಖ್ಯಸ್ಥರಾಗಿ ಖುಷಿಯಾಗಿಯೇ ಇದ್ದರು. ಆದ್ರೆ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಲು ಮೊದಲು ನಿರಾಕರಿಸಿದ್ದ ದ್ರಾವಿಡ್ ನಂತರ ಮನಸ್ಸು ಬದಲಾಯಿಸಿದ್ರು. ಏನೇ ಆಗ್ಲಿ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗಿರೋದು ಸಂತಸವನ್ನುಂಟು ಮಾಡಿದೆ. ಅವರ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಪಾಂಟಿಂಗ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೂ ಇದೇ ಕಾರಣಕ್ಕೆ ನಾನು ಹೆಡ್ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಕ್ರಿಕೆಟಿಗನಾಗಿ ನಾನು ಕುಟುಂಬದಿಂದ ದೂರವೇ ಉಳಿದಿದ್ದೆ. ಇದೀಗ ಕುಟುಂಬಕ್ಕೂ ಸಮಯ ನೀಡಬೇಕಾಗಿದೆ. ಆದ್ರೆ ಕೋಚಿಂಗ್ ನೀಡುವುದು ನನಗೆ ಈಗ ಇಷ್ಟವಾದ ಕೆಲಸ. ನನ್ನ ಅನುಭವ, ಮಾರ್ಗದರ್ಶನ ನೀಡುವುದು ಕ್ರಿಕೆಟಿಗನಾಗಿ ನನ್ನ ಕರ್ತವ್ಯ. ಆದ್ರೂ ಕುಟುಂಬ ಅಂತ ಬಂದಾಗ ಕೆಲವೊಂದು ಬಾರಿ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಂದು ಅವಕಾಶಗಳನ್ನು ಬಿಟ್ಟುಬಿಡಬೇಕಾಗುತ್ತದೆ ಎಂಬುದು ಅವರ ಅಭಿಮತವಾಗಿದೆ.
ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ಆಗಿ ನಾನು ಮುಂದುವರಿಯುತ್ತೇನೆ. ಐಪಿಎಲ್ ನಲ್ಲಿ ಕೆಲವು ತಿಂಗಳು ಕುಟುಂಬದಿಂದ ದೂರ ಉಳಿಯಬೇಕಾಗುತ್ತದೆ. ಡೆಲ್ಲಿ ತಂಡ ಕಳೆದ ಮೂರು ನಾಲ್ಕು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಿದೆ. ತಂಡದಲ್ಲಿರುವ ಅನೇಕ ಯುವ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುತ್ತಿದ್ದಾರೆ. ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಅವೇಶ್ ಖಾನ್ ಮೊದಲಾದವರು ಗಮನ ಸೆಳೆಯುವಂತಹ ಪ್ರದರ್ಶನ ನೀಡುತ್ತಿದ್ದಾರೆ. ಇಂತಹ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿದ್ದು ನನಗೆ ಹೆಮ್ಮೆ ಅನ್ನಿಸುತ್ತಿದೆ ಎಂದು ಪಾಟಿಂಗ್ ತಿಳಿಸಿದ್ದಾರೆ.