ಬಾಲಿಯಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ ಸಿಂಧು ಅವರು ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಸಿಂಧು 21-13, 21-10 ರಿಂದ ಟರ್ಕಿಯ ನೆಸ್ಲಿಹಾನ್ ಯಿಸಿಟ್ ಅವರನ್ನು 35 ನಿಮಿಷಗಳ ಹೋರಾಟದಲ್ಲಿ ಮಣಿಸಿದರು. ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ, ಟೊಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಸಾಧನೆ ಮಾಡಿದ ಸಿಂಧು, ಪ್ರಶಸ್ತಿಯಿಂದ ಎರಡು ಹೆಜ್ಜೆ ಹಿಂದೆ ನಿಂತಿದ್ದಾರೆ.
ಮೊದಲ ಗೇಮ್ ನಲ್ಲಿ ಟರ್ಕಿಯ ಆಟಗಾರ್ತಿ ಅಂಕದ ಖಾತೆ ತೆರೆದು ಸಿಂಧು ಮೇಲೆ ಒತ್ತಡ ಹೇರುವ ತಂತ್ರಕ್ಕೆ ಮಣೆ ಹಾಕಿದರು. ಆದರೆ ಈ ಕನಸು ನನಸಾಗಲಿಲ್ಲ. ಸಿಂಧು ಸ್ಥಿರ ಪ್ರದರ್ಶನ ನೀಡಿ ಸತತ ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದರು. ಆರಂಭದಲ್ಲಿ 11-6ರಿಂದ ಮುನ್ನಡೆ ಸಾಧಿಸಿದ ಸಿಂಧು ಹಿಂತಿರುಗಿ ನೋಡಲಿಲ್ಲ. ಸುಲಭವಾಗಿ ಮೊದಲ ಗೇಮ್ ಗೆದ್ದರು.
ಎರಡನೇ ಗೇಮ್ ನಲ್ಲಿ ಸಿಂಧುಗೆ ಶಾಕ್ ನೀಡಿ ಅಂಕಗಳನ್ನು ಬಾಚಿಕೊಳ್ಳುವ ನೆಸ್ಲಿಹಾನ್ ಯಿಸಿಟ್ ಆಸೆ ಆರಂಭದಲ್ಲಿ ಫಲಿಸಿದರೂ, ನಂತರ ಕೈ ಕೊಟ್ಟಿತು. ಒಂದು ಹಂತದಲ್ಲಿ 7-8 ರಿಂದ ಸಿಂಧು ಹಿನ್ನಡೆ ಅನುಭವಿಸಿದರೂ, ನಂತರ ಸತತ ಎಂಟು ಅಂಕಗಳನ್ನು ಕಲೆ ಹಾಕಿ ಆರ್ಭಟಿಸಿ, ಉಪಾಂತ್ಯ ಪ್ರವೇಶಿಸಿದರು.