ಬ್ಯಾಟಿಂಗ್‌ನಲ್ಲಿ ಅದ್ಭುತ ಯಶಸ್ಸಿನ ಅಲೆಯಲ್ಲಿರುವ ಬಾಬರ್ ಆಜ಼ಂ, ತಮ್ಮ ಬ್ಯಾಟಿಂಗ್ ಪರಾಕ್ರಮ ಮುಂದುವರಿಸಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿರುವ ಪಾಕಿಸ್ತಾನ ತಂಡದ ನಾಯಕ, ಇದೀಗ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 15 ಶತಕ ಬಾರಿಸಿದ ಆಟಗಾರ ಎನಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಲಾಹೋರ್‌ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬಾಬರ್ ಆಜ಼ಂ, ತಂಡಕ್ಕೆ ದಾಖಲೆಯ ಗೆಲುವು ತಂದುಕೊಡುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅಮೋಘ ಶತಕ (114 ರನ್‌ಗಳು) ಸಿಡಿಸಿ ಸಂಭ್ರಮಿಸಿದ ಬಾಬರ್ ಆಜ಼ಂ, ಏಕದಿಕ ಕ್ರಿಕೆಟ್‌ನಲ್ಲಿ 15ನೇ ಶತಕ ದಾಖಲಿಸಿದರು. ಅಲ್ಲದೇ 83 ಇನ್ನಿಂಗ್ಸ್‌ನಲ್ಲಿ 15 ಶತಕ ಪೂರೈಸಿದ ಬಾಬರ್, ವೇಗವಾಗಿ 15 ಶತಕಗಳಿಸಿದ ಆಟಗಾರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಮೂಲಕ ಹೊಸ ದಾಖಲೆ ಬರೆದರು.
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಸಹ ಬಾಬರ್ ಆಜ಼ಂ ಅದ್ಭುತ ಪ್ರದರ್ಶನ ನೀಡಿದ್ದರು. ದ್ವಿತೀಯ ಟೆಸ್ಟ್‌ನಲ್ಲಿ ಜವಾಬ್ದಾರಿಯ ಆಟವಾಡಿದ ಬಾಬರ್, ತಂಡವನ್ನ ಸೋಲಿನ ಸುಳಿಯಿಂದ ಪಾರು ಮಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಬಾಬರ್ ಆಜ಼ಂ ಅವರ ಈ ಶ್ರೇಷ್ಠ ಪ್ರದರ್ಶನದಿಂದ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ.
ವೇಗವಾಗಿ 15 ಶತಕಗಳು:
ಬಾಬರ್ ಆಜ಼ಂ – 83 ಇನ್ನಿಂಗ್ಸ್
ಹಶೀಮ್ ಆಮ್ಲಾ – 86 ಇನ್ನಿಂಗ್ಸ್
ವಿರಾಟ್ ಕೊಹ್ಲಿ – 106 ಇನ್ನಿಂಗ್ಸ್
ಡೇವಿಡ್ ವಾರ್ನರ್ – 108 ಇನ್ನಿಂಗ್ಸ್
ಶಿಖರ್ ಧವನ್ – 108 ಇನ್ನಿಂಗ್ಸ್
ಆಸೀಸ್ ವಿರುದ್ಧ ಗರಿಷ್ಠ ರನ್:
ಅಲ್ಲದೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಸಿದ ಪಾಕಿಸ್ತಾನ ತಂಡದ ಕ್ಯಾಪ್ಟನ್‌ಗಳ ಸಾಲಿನಲ್ಲೂ ಬಾಬರ್ ಆಜ಼ಂ ನಂ.1 ಸ್ಥಾನಕ್ಕೇರಿದರು. ಈ ಹಿಂದೆ ಇಮ್ರಾನ್ ಖಾನ್ 1990ರಲ್ಲಿ 84 ರನ್‌ಗಳಿಸಿದ್ದು, ಈವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಆದರೆ ಆಸೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 114 ರನ್‌ಗಳಿಸಿದ ಬಾಬರ್ ಆಜ಼ಂ, ಆ ಮೂಲಕ ದಶಕಗಳ ಹಿಂದಿನ ದಾಖಲೆಯನ್ನು ಹಿಂದಿಕ್ಕಿದರು.