ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗ್ರೀನ್ ಜೆರ್ಸಿ ಲಕ್ ತರುವುದಿಲ್ಲ ಎಂಬ ಮಾತುಗಳಿದ್ದವು. ಇದಕ್ಕೆ ಅಂಕಿ ಅಂಶಗಳು ಸಹ ಪುಷ್ಟಿ ನೀಡಿದ್ದವು. ಆದರೆ ಈಗ ನಾವು ಹೇಳಲು ಹೊರಟಿರುವ ಸುದ್ದಿಯನ್ನು ಕೇಳಿದ್ರೆ ಬಹು ವರ್ಷಗಳಿಂದ ಅಭಿಮಾನಿಗಳು ಹೇಳುತ್ತಿದ್ದ ಘೋಷ ವಾಕ್ಯ ನೆನಪಾಗದೇ ಇರದು. ಈ ಬಾರಿ ಕಪ್ ನಮ್ದೆ…
ಭಾನುವಾರ ಒಂದು ಪಂದ್ಯದಲ್ಲಿ ಗೆಲುವು ದಾಖಲಿಸಿದ ಮಾತ್ರಕ್ಕೆ ಈ ಬಾರಿ ಕಪ್ ನಮ್ದೆ ನಾ ಎಂದು ನೀವು ಕೇಳ ಬಹುದು. ಆದರೆ ನಾವು ಹೇಳುವ ಅಂಕಿ ಅಂಶಗಳನ್ನು ಒಮ್ಮೆ ಮೆಲಕು ಹಾಕಿದರೆ, ಹೌದು.. ಈ ಬಾರಿ ನಮಗೂ ಚಾನ್ಸ್ ಜಾಸ್ತಿ ಇದೆ ಎನಿಸುತ್ತಿದೆ. ಅಸಲಿಗೆ ಆರ್ ಸಿಬಿ ಭಾನುವಾರದ ಪಂದ್ಯ ಸೇರಿದಂತೆ ಗ್ರೀನ್ ಜೆರ್ಸಿಯಲ್ಲಿ ಒಟ್ಟು 11 ಬಾರಿ ಕಣಕ್ಕೆ ಇಳಿದಿದೆ. ಇದರಲ್ಲಿ ಕೇವಲ ಮೂರರಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ಆರ್ ಸಿಬಿ ಹಸಿರು ಜೆರ್ಸಿ ಹಾಕಿಕೊಂಡು ಅಬ್ಬರಿಸಿದಾಗ ತಂಡ ಚೇತೋಹಾರಿ ಪ್ರದರ್ಶನ ನೀಡಿ ಫೈನಲ್ ಗೆ ಅರ್ಹತೆ ಪಡೆದಿತ್ತು.
ಹೌದು… ಬೆಂಗಳೂರು ತಂಡ ಒಟ್ಟಾರೆ ಮೂರು ಬಾರಿ ಐಪಿಎಲ್ ಫೈನಲ್ ಗೆ ಅರ್ಹತೆ ಪಡೆದಿದೆ. ಅದರಲ್ಲಿ ಎರಡು ಬಾರಿ ಗ್ರೀನ್ ಜೆರ್ಸಿ ಹಾಕಿಕೊಂಡು ಗೆದ್ದಾಗ ರಾಯಲ್ ತಂಡ ಪ್ರಶಸ್ತಿ ಸುತ್ತು ಪ್ರವೇಶಿಸಿರುವುದು ವಿಶೇಷ..

ಹಸಿರು ಜೆರ್ಸಿಯಲ್ಲಿ ಮೊದಲ ಗೆಲುವು
2011ರಲ್ಲಿ ನಡೆದಿದ್ದ ಐಪಿಎಲ್ ನ 50ನೇ ಪಂದ್ಯದಲ್ಲಿ ಕೊಚಿ ಟಸ್ಕರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಚಿ 20 ಓವರ್ ಗಳಲ್ಲಿ 9 ವಿಕೆಟ್ ಗೆ 125 ರನ್ ಕಲೆ ಹಾಕಿತು. ಬೆಂಗಳೂರು ತಂಡದ ಪರ ಎಸ್. ಅರವಿಂದ್ ಹಾಗೂ ಡೇನಿಯಲ್ ವಿಟೋರಿ ಎರಡು ವಿಕೆಟ್ ಪಡೆದಿದ್ದರು.

ಗುರಿಯನ್ನು ಹಿಂಬಾಲಿಸಿದ ಬೆಂಗಳೂರು 13.1 ಓವರ್ ಗಳಲ್ಲಿ 1 ವಿಕೆಟ್ ಗೆ 128 ರನ್ ಸೇರಿಸಿತು. ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ 44, ತಿಲಕರತ್ನೆ ದಿಲ್ಶಾನ್ ಅಜೇಯ 52 ರನ್ ಬಾರಿಸಿ ಜಯದಲ್ಲಿ ಮಿಂಚಿದ್ದರು. ಈ ಪಂದ್ಯದಲ್ಲಿ ಆರ್ ಸಿಬಿ ಹಸಿರು ಬಣ್ಣದ ಜೆರ್ಸಿ ತೊಟ್ಟಿತ್ತು. ಈ ಆವೃತ್ತಿಯಲ್ಲೂ ಆರ್ ಸಿಬಿ ಫೈನಲ್ ಗೆ ಪ್ರವೇಶಿಸಿತ್ತು. ಚೆನ್ನೈ ವಿರುದ್ಧ ಬೆಂಗಳೂರು ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ನಿರಾಸೆ ಅನುಭವಿಸಿತ್ತು.

ಹಸಿರು ಜೆರ್ಸಿಯಲ್ಲಿ ಎರಡನೇ ಗೆಲುವು
ಹಸಿರು ಜೆರ್ಸಿ ತೊಟ್ಟುಕೊಂಡು 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧವೂ ಆರ್ ಸಿಬಿ ಅಬ್ಬರಿಸಿತ್ತು. ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರ ಭರ್ಜರಿ ಶತಕದ ನೆರವಿನಿಂದ 20 ಓವರ್ ಗಳಲ್ಲಿ 3 ವಿಕೆಟ್ ಗೆ 248 ರನ್ ಸೇರಿಸಿತ್ತು.

ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಲಯನ್ಸ್ 104 ರನ್ ಗಳಿಗೆ ಸರ್ವಪತನ ಹೊಂದಿತು. ಈ ಆವೃತ್ತಿಯ ಫೈನಲ್ ನಲ್ಲಿ ವಿರಾಟ್ ಪಡೆ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿತ್ತು.
ಇನ್ನೋಂದು ವಿಶೇಷವಾದ ಅಂಶವೆಂದರೆ ಗ್ರೀನ್ ಜೆರ್ಸಿ ತೊಟ್ಟು ಗೆದ್ದ ಎಲ್ಲ ಪಂದ್ಯಗಳು ಮಧ್ಯಾಹ್ನವೇ ನಡೆದಿದ್ದು.. ಇಷ್ಟೇಲ್ಲಾ ಅಂಕಿ ಅಂಶಗಳು ಈ ಬಾರಿ ಆರ್ ಸಿಬಿ ಫೈನಲ್ ಗೆ ಹೋಗುವುದು ಫಿಕ್ಸ್ ಎಂದು ಹೇಳುತ್ತಿವೆ.