ಏಷ್ಯಾಕಪ್ ಟೂರ್ನಿಯಲ್ಲಿ (Asia Cup) ಭಾರತ (India) ಉತ್ತಮ ಆಟವನ್ನು ಪ್ರದರ್ಶಿಸಿದೆ. ಆದರೆ ಸೂಪರ್ 4 ಆಟಕ್ಕೆ ಮೊದಲೇ ಶಾಕ್ ಅನುಭವಿಸಿದೆ. ತಂಡದ ಸ್ಟಾರ್ ಆಲ್ರೌಂಡರ್ (All rounder) ರವೀಂದ್ರ ಜಡೇಜಾ (Ravindra Jadeja) ಗಾಯಗೊಂಡು (Injured) ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಜಡೇಜಾ ಸ್ಥಾನದಲ್ಲಿ ಅಕ್ಸರ್ ಪಟೇಲ್ (Axar Patel) ಆಡುವುದು ಖಚಿತವಾಗಿದೆ.
ರವೀಂದ್ರ ಜಡೇಜಾ ಬಲ ಮೊಣಕಾಲು ಗಾಯಕ್ಕೆ ತುತ್ತಾಗಿದ್ದಾರೆ. ಕಳೆದ ಜುಲೈನಲ್ಲಿ ನಡೆದ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಯ ವೇಳೆಯೂ ಜಡೇಜಾ ಇದೇ ಸಮಸ್ಯೆ ಅನುಭವಿಸಿದ್ದರು. ಬಿಸಿಸಿಐ (BCCI) ಅಕ್ಸರ್ ಪಟೇಲ್ರನ್ನು ಏಷ್ಯಾಕಪ್ ಬ್ಯಾಕ್ಅಪ್ ತಂಡದಲ್ಲಿಟ್ಟಿತ್ತು. ಈಗ ಜಡ್ಡು ಸ್ಥಾನ ತುಂಬಬೇಕಿದೆ. ಜಡೇಜಾ ಗಾಯ ಎಷ್ಟರ ಮಟ್ಟಿಗೆ ದೊಡ್ಡದು ಅನ್ನುವ ಬಗ್ಗೆ ಬಿಸಿಸಿಐ ಪರಿಶೀಲನೆ ನಡೆಸುತ್ತಿದೆ. ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ಗೆ (T20 World Cup) ಜಡೇಜಾ ಫಿಟ್ ಆಗುವುದನ್ನು ಟೀಮ್ ಇಂಡಿಯಾ ಎದುರು ನೋಡುತ್ತಿದೆ.
ಏಷ್ಯಾಕಪ್ನ ಮೊದಲ ಪಂದ್ಯದಲ್ಲಿ ಜಡೇಜಾ ಪಾಕಿಸ್ತಾನ ವಿರುದ್ಧ 4ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬ್ಯಾಟಿಂಗ್ ನಡೆಸಿ 35 ರನ್ಗಳಿಸಿದ್ದರು. ಅಷ್ಟೇ ಅಲ್ಲ ಹಾರ್ದಿಕ್ ಪಾಂಡ್ಯಾ ಜೊತೆಗೆ ಅತ್ಯಮೂಲ್ಯ ಜೊತೆಯಾಟ ಕಟ್ಟಿದ್ದರು. ಆ ಪಂದ್ಯದಲ್ಲಿ ಜಡ್ಡು ಕೇವಲ 2 ಓವರ್ಗಳ ಬೌಲಿಂಗ್ ಮಾತ್ರ ಮಾಡಿದ್ದರು. ಹಾಂಕಾಂಗ್ ವಿರುದ್ಧ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಬೌಲಿಂಗ್ನಲ್ಲಿ ಬಾಬರ್ ಹಯಾತ್ ಅವರ ಮಹತ್ವದ ವಿಕೆಟ್ ಪಡೆದಿದ್ದಲ್ಲದೆ ತನ್ನ ಕೋಟಾದ 4 ಓವರುಗಳಲ್ಲಿ 15 ರನ್ ಮಾತ್ರ ನೀಡಿದ್ದರು.
ಜಡೇಜಾ ತವರಿನಲ್ಲಿ ನಡೆಯುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಕ್ಸರ್ ಪಟೇಲ್ ಕೂಡ ಜಡೇಜಾರಂತೆ ಎಡಗೈ ಸ್ಪಿನ್ ಮತ್ತು ಎಡಗೈ ಬ್ಯಾಟ್ಸ್ಮನ್. ಹಲವು ಬಾರಿ ಟೀಮ್ ಇಂಡಿಯಾದಲ್ಲಿ ಜಡೇಜಾ ಸ್ಥಾನವನ್ನು ತುಂಬಿದ ಅನುಭವ ಕೂಡ ಇದೆ. ಆದರೆ ವಿಶ್ವಕಪ್ನಂತಹ ದೊಡ್ಡ ಟೂರ್ನಿಗಳಿಗೆ ಜಡೇಜಾ ಫಿಟ್ ಆಗುವುದು ಟೀಮ್ ಇಂಡಿಯಾದ ಮಟ್ಟಿಗೆ ದೊಡ್ಡ ಬೋನಸ್ ಅನ್ನುವುದನ್ನು ಮರೆಯುವ ಹಾಗಿಲ್ಲ.