ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಸೂಪರ್ ಸ್ಟಾರ್ ರಜನಿಕಾಂತ್ರಷ್ಟೇ ಟ್ರಾಲ್ ಆದ ಕ್ರಿಕೆಟಿಗ. ಆದರೆ ಟ್ರಾಲ್ ಪಾಡಿಗೆ ಅದು ಇರಲಿ, ನಾನು ಆಟ ಮಾತ್ರ ಆಡ್ತಿನಿ ಎಂದು ತೋರಿಸಿ ಕೊಟ್ಟಿದ್ದು ಈ ಸೌರಾಷ್ಟ್ರ ಆಟಗಾರ. ಇಂಗ್ಲೆಂಡ್ ವಿರುದ್ಧ ಬರ್ಮಂಗ್ ಹ್ಯಾಂ ಟೆಸ್ಟ್ನಲ್ಲಿ ಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 3ನೇ ಶತಕ ಸಿಡಿಸಿದ ಸಂಭ್ರಮ ಆಚರಿಸಿಕೊಂಡರು.
ಬರ್ಮಿಂಗ್ ಹ್ಯಾಂನಲ್ಲಿ ಜಡೇಜಾ ಆಟಕ್ಕಿಳಿದಾಗ ಟೀಮ್ ಇಂಡಿಯಾ ಸಂಕಷ್ಟದಲ್ಲಿತ್ತು. ರಿಷಬ್ ಪಂತ್ ಜೊತೆ ಸೇರಿಕೊಂಡು 6ನೇ ವಿಕೆಟ್ಗೆ 222 ರನ್ಜೊತೆಯಾಟ ಆಡಿದರು. ಸಂಕಷ್ಟದಲ್ಲಿದ್ದ ತಂಡವನ್ನು ಎಚ್ಚರಿಕೆಯ ಆಟದ ಮೂಲಕ ಕಾಪಾಡಿದರು. ರಿಷಬ್ ಪಂತ್ ಅಬ್ಬರಿಸುತ್ತಿದ್ದಾಗ ಸೈಲೆಂಟ್ ಆಗಿ ನೋಡುತ್ತಿದ್ದರು. ಆದರೆ 2ನೇ ದಿನ ತನ್ನ ಟೆಸ್ಟ್ ಶತಕದ ಸಂಭ್ರಮ ಆಚರಿಸಿಕೊಂಡರು.

ಕೊನೆಯ 23 ಟೆಸ್ಟ್ಗಳಲ್ಲಿ 3 ಶತಕ
ಜಡೇಜಾ 60 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಮೊದಲ 37 ಟೆಸ್ಟ್ ಪಂದ್ಯಗಳಲ್ಲಿ ಶತಕ ಸಿಡಿಸಲಿಲ್ಲ. ಆದರೆ ಕೊನೆಯ 23 ಟೆಸ್ಟ್ ಪಂದ್ಯಗಳಲ್ಲಿ 3 ಶತಕ ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ರಾಜ್ ಕೋಟ್ ನಲ್ಲಿ, ಲಂಕಾ ವಿರುದ್ಧ ಮೊಹಾಲಿಯಲ್ಲಿ ಹಾಗೂ ಈಗ ಬರ್ಮಿಂಗ್ ಹ್ಯಾಂನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಾಧನೆ ಮಾಡಿದ್ದಾರೆ.
ಕಳೆದ ಎರಡೂ ವರ್ಷದಲ್ಲಿ ವಿರಾಟ್ ಕೊಹ್ಲಿಯಿಂದ ಒಂದೇ ಒಂದು ಅಂತರಾಷ್ಟ್ರೀಯ ಶತಕ ಬಂದಿಲ್ಲ. ಆದರೆ ಜಡೇಜಾ ಬ್ಯಾಟ್ನಿಂದ 2 ಶತಕ ಸಿಡಿದಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಈಗ ಜಡೇಜಾ ಟೈಮ್ ಅಂದ್ರೂ ತಪ್ಪಿಲ್ಲ.