ಟೀಮ್ ಇಂಡಿಯಾದ ನಾಯಕ ಜಸ್ಪ್ರಿತ್ ತನ್ನ ಟೆಸ್ಟ್ ಕ್ಯಾಪ್ಟನ್ಸಿಯ ಮೊದಲ ಇನ್ನಿಂಗ್ಸ್ನಲ್ಲೇ ದಾಖಲೆ ಬರೆದಿದ್ದಾರೆ. ಅಂದಹಾಗೇ, ಬುಮ್ರಾ ಈ ಬಾರಿ ಬೌಲಿಂಗ್ನಲ್ಲಿ ಮಿಂಚಿಲ್ಲ. ಬದಲಾಗಿ ಬ್ಯಾಟಿಂಗ್ನಲ್ಲಿ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ನಲ್ಲಿ 35 ರನ್ಗಳಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ ಅತೀ ಹೆಚ್ಚು ರನ್ಗಳಿಸಿದ ದಾಖಲೆ ಬರೆದಿದ್ದಾರೆ.
ರವೀಂದ್ರ ಜಡೇಜಾ ಔಟಾದ ಬಳಿಕ ಕ್ರೀಸ್ಗಳಿದ ಜಸ್ಪ್ರಿತ್ ಬುಮ್ರಾ ಸ್ಟುವರ್ಟ್ ಬ್ರಾಡ್ ಎಸೆದ 84ನೇ ಓವರ್ನಲ್ಲಿ 35 ರನ್ಗಳಿಸಿದರು. 84ನೇ ಓವರ್ನ ಮೊದಲ ಎಸೆತದಲ್ಲಿ ಫೋರ್ ಬಾರಿಸಿದ ಬುಮ್ರಾ, ಮುಂದಿನ ಎಸೆತದಲ್ಲಿ ವೈಡ್ & ಬೈಸ್ ಮೂಲಕ 5 ರನ್ ಪಡೆದುಕೊಂಡರು. 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಆ ಎಸೆತ ನೋ ಬಾಲ್ ಆಗಿತ್ತು ಹೀಗಾಗಿ 7 ರನ್ ಬಂತು. ಮುಂದಿನ 3 ಎಸೆತಗಳಲ್ಲಿ ಮತ್ತೆ 3 ಫೋರ್ ಬಾರಿಸಿದರು. ಓವರ್ನ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. 6ನೇ ಎಸೆತದಲ್ಲಿ ಒಂದು ರನ್ಗಳಿಸಿದರು. ಅಲ್ಲಿಗೆ ಬ್ರಾಡ್ ಒಂದೇ ಓವರ್ನಲ್ಲಿ 35 ರನ್ ಕೊಟ್ಟು ಬೇಡವಾದ ದಾಖಲೆ ಬರೆದರು. ಬುಮ್ರಾ ಒಂದೇ ಓವರ್ನಲ್ಲಿ 29 ರನ್ ಸಿಡಿಸಿ ವಿಶ್ವ ದಾಖಲೆ ಬರೆದರು.
ಟೆಸ್ಟ್ನಲ್ಲಿ ಒಂದೇ ಓವರ್ನಲ್ಲಿ ಆಟಗಾರನೊಬ್ಬ 28 ರನ್ಗಳಿಸಿದ್ದು ದಾಖಲೆಯಾಗಿತ್ತು. ಬ್ರ್ಯಾನ್ ಲಾರಾ ರಾಬಿನ್ ಪೀಟರ್ಸನ್ ವಿರುದ್ಧ, ಜಾರ್ಜ್ ಬೈಲಿ ಜೇಮ್ಸ್ ಆ್ಯಂಡರ್ಸನ್ ವಿರುದ್ಧ ಹಾಗೂ ಕೇಶವ್ ಮಹಾರಾಜ್ ಜೋ ರೂಟ್ ವಿರುದ್ಧ ಈ ದಾಖಲೆ ಬರೆದಿದ್ದರು. ಈಗ ಬುಮ್ರಾ ಈ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ.
ಅಚ್ಚರಿ ಅಂದರೆ ಸ್ಟುವರ್ಟ್ ಬ್ರಾಡ್ ಟಿ20 ಕ್ರಿಕೆಟ್ನಲ್ಲಿ ಓವರ್ ಒಂದಕ್ಕೆ 6 ಸಿಕ್ಸರ್ ಹೊಡೆಸಿಕೊಂಡು ಭಾರತದ ವಿರುದ್ಧವೇ 36 ರನ್ ಬಿಟ್ಟುಕೊಟ್ಟಿದ್ದು ಚುಟುಕು ಕ್ರಿಕೆಟ್ನಲ್ಲಿ ಈವರೆಗೆ ದಾಖಲೆಯಾಗಿ ಉಳಿದಿದೆ. ಈಗ ಟೆಸ್ಟ್ ಪಂದ್ಯದಲ್ಲೂ ಬ್ರಾಡ್ ಒಂದೇ ಓವರ್ನಲ್ಲಿ 35 ರನ್ ಬಿಟ್ಟು ಕೆಟ್ಟ ದಾಖಲೆ ಬರೆದಿದ್ದಾರೆ.