Ranji Trophy – ಎರಡು ಹಂತಗಳಲ್ಲಿ ರಣಜಿ ಟೂರ್ನಿ ಆಯೋಜನೆ ಮಾಡಲು ಬಿಸಿಸಿಐ ಪ್ಲಾನ್
ಕೊನೆಗೂ ದೇಸಿ ಕ್ರಿಕೆಟ್ ನ ರಾಜ ರಣಜಿ ಟೂರ್ನಿಯನ್ನು ಆಯೋಜನೆ ಮಾಡಲು ಬಿಗ್ ಬಾಸ್ ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ.
ಕೋವಿಡ್ -19 ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳಿಂದ ರಣಜಿ ಟೂರ್ನಿಯನ್ನು ಆಯೋಜನೆ ಮಾಡಲು ಸಾಧ್ಯವಾಗಿಲ್ಲ. ಆದ್ರೂ 2022ರ ಜನವರಿ 13ರಿಂದ ರಣಜಿ ಟೂರ್ನಿಯನ್ನು ಆಯೋಜನೆ ಮಾಡಲು ಬಿಸಿಸಿಐ ಮುಂದಾಗಿತ್ತು. ಆದ್ರೆ ಕೋವಿಡ್ ಮೂರನೇ ಅಲೆಯಿಂದಾಗಿ ಟೂರ್ನಿಯನ್ನು ಮುಂದುಡಲಾಗಿತ್ತು.
ಇದೀಗ ರಣಜಿ ಟೂರ್ನಿಯನ್ನು ಎರಡು ಹಂತಗಳಲ್ಲಿ ಆಯೋಜನೆ ಮಾಡಲು ಬಿಸಿಸಿಐ ಮುಂದಾಗಿದೆ. ಇದಕ್ಕೆ ಕಾರಣವೂ ಇದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 27ರಿಂದ ಆರಂಭವಾಗುವುದು ಬಹುತೇಕ ಖಚಿತವಾಗಿದೆ.
Ranji Trophy to be held in two phases: BCCI
ಹೀಗಾಗಿ ಫೆಬ್ರವರಿ – ಮಾರ್ಚ್ ನಲ್ಲಿ ಮೊದಲ ಹಂತವಾಗಿ ರಣಜಿ ಟೂರ್ನಿಯನ್ನು ಆಯೋಜನೆ ಮಾಡಲಾಗುವುದು. ನಂತರ ಐಪಿಎಲ್ ಟೂರ್ನಿ ಇರುವುದರಿಂದ ಎರಡನೇ ಹಂತವಾಗಿ ಜೂನ್ ಮತ್ತು ಜುಲೈ ನಲ್ಲಿ ಟೂರ್ನಿಯನ್ನು ನಡೆಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ.
ಆದ್ರೆ ಎರಡನೇ ಹಂತದಲ್ಲಿ ಮಳೆಗಾಲ ಶುರುವಾಗುತ್ತಿರುವುದರಿಂದ ಈ ಬಗ್ಗೆಯೂ ಬಿಸಿಸಿಐ ಯೋಜನೆ ಹಾಕಿಕೊಂಡಿದೆ. ಆದ್ರೆ ಆಟಗಾರರ ಆರೋಗ್ಯದ ಕಡೆಗೂ ಗಮನ ಹರಿಸಬೇಕಾಗುತ್ತದೆ. ಹೀಗಾಗಿ ಬಿಸಿಸಿಐ ಎಲ್ಲವನ್ನು ಅವಲೋಕನ ಮಾಡಿಕೊಂಡು ರಣಜಿ ಟೂರ್ನಿಯನ್ನು ಸಂಘಟಿಸಲು ಮುಂದಾಗಿದೆ.
ಸದ್ಯ ಕೋವಿಡ್ ನಿಂದಾಗಿ ಬಿಸಿಸಿಐ ಸಯ್ಯದ್ ಮುಷ್ತಾಕ್ ಆಲಿ ಟಿ-20 ಟೂರ್ನಿ ಮತ್ತು ವಿಜಯ ಹಜಾರೆ ಏಕದಿನ ಟೂರ್ನಿಯನ್ನು ಮಾತ್ರ ಆಯೋಜನೆ ಮಾಡಿದೆ. ಆದ್ರೆ ರಣಜಿ ಟೂರ್ನಿಯನ್ನು ಆಯೋಜನೆ ಮಾಡುವುದು ಮುಖ್ಯವಾಗಿರುತ್ತದೆ. ಯಾಕಂದ್ರೆ ಭಾರತ ಎ ತಂಡವನ್ನು ಆಯ್ಕೆ ಮಾಡಬೇಕಾದ್ರೆ ರಣಜಿ ಟೂರ್ನಿಯಲ್ಲಿ ಆಟಗಾರರ ಪ್ರದರ್ಶನ ಮುಖ್ಯ ಮಾನದಂಡವಾಗಿರುತ್ತದೆ. ಈಗಾಗಲೇ ದೇಸಿ ಕ್ರಿಕೆಟರ್ ಗಳಿಗೆ ಬಿಸಿಸಿಐ ಶೇ,50 ರಷ್ಟು ಹಣವನ್ನು ಪಾವತಿ ಮಾಡಿದೆ. ಆದ್ರೆ ರಣಜಿ ಟೂರ್ನಿ ಆಯೋಜನೆ ಮಾಡದಿರುವುದರಿಂದ ಆಟಗಾರರಿಗೆ ಆರ್ಥಿಕವಾಗಿಯೂ ನಷ್ಟವಾಗುತ್ತದೆ.
ಅಂದ ಹಾಗೇ ರಣಜಿ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಭಾಗವಹಿಸುತ್ತಿವೆ.