Deepak Hooda – ಅಂದು ಅವಮಾನ.. ಇಂದು ಟೀಮ್ ಇಂಡಿಯಾದಲ್ಲಿ ಸ್ಥಾನ ಮಾನ..! ಇದು ದೀಪಕ್ ಹೂಡಾ ಅವರ ನೈಜ ಕಥೆ..!
ದುಡ್ಡು ಬೇಡ. ಕ್ರಿಕೆಟ್ ಆಡಬೇಕು..!
ಇದು ದೀಪಕ್ ಹೂಡಾ ನ ಮೂಲ ಮಂತ್ರ
ದೀಪಕ್ ಹೂಡಾ… 26ರ ಹರೆಯದ ಬರೋಡಾ ಮೂಲದ ಆಟಗಾರ. 2017ರಲ್ಲಿಟೀಮ್ ಇಂಡಿಯಾಗೆ ಆಯ್ಕೆಯಾದ್ರೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಐದು ವರ್ಷಗಳ ಬಳಿಕ ಮತ್ತೆ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದ ಏಕದಿನ ತಂಡದೊಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಅಂದ ಹಾಗೇ ದೀಪಕ್ ಹೂಡಾ ಅವರ ಕ್ರಿಕೆಟ್ ಜರ್ನಿ ಬದಲಾಗಿದ್ದು ಆ ಒಂದು ಘಟನೆಯಿಂದ. ಅವಮಾನ ಒಬ್ಬ ವ್ಯಕ್ತಿಯನ್ನು ಯಾವ ರೀತಿ ಬದಲಾವಣೆ ಮಾಡಿಸುತ್ತೆ ಮತ್ತು ಯಶಸ್ಸಿನ ಮೆಟ್ಟಿಲು ಏರಲು ಹೇಗೆ ಸಾಧ್ಯವಾಗುತ್ತೆ ಎಂಬುದಕ್ಕೆ ದೀಪಕ್ ಹೂಡಾ ಉತ್ತಮ ನಿದರ್ಶನ.
ಅದು ಕಳೆದ ವರ್ಷ ವಿಜಯ ಹಜಾರೆ ಟೂರ್ನಿಯ ವೇಳೆ ನಡೆದಿದ್ದ ಘಟನೆ. ಕೃನಾಲ್ ಪಾಂಡ್ಯ ಬರೋಡಾ ತಂಡದ ನಾಯಕನಾಗಿದ್ದು. ದೀಪಕ್ ಹೂಡ ಅವರು ಉಪನಾಯಕನಾಗಿದ್ದರು. ಅದೇನೋ ಗೊತ್ತಿಲ್ಲ. ದೀಪಕ್ ಹೂಡಾ ಮತ್ತು ಕೃನಾಲ್ ಪಾಂಡ್ಯ ನಡುವೆ ಹೊಂದಾಣಿಕೆ ಇರಲಿಲ್ಲ. ಹೊಟೇಲ್ ನಲ್ಲಿ ಕೃನಾಲ್ ಪಾಂಡ್ಯ ಅವರು ದೀಪಕ್ ಹೂಡಾ ಅವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದ್ರಿಂದ ಸಿಟ್ಟುಗೊಂಡ ಹೂಡಾ ಅವರು ಬರೋಡಾ ಕ್ರಿಕೆಟ್ ಸಂಸ್ಥೆಗೆ ದೂರು ನೀಡಿದ್ದರು. ಆದ್ರೆ ಬರೋಡಾ ಕ್ರಿಕೆಟ್ ಸಂಸ್ಥೆ ದೀಪಕ್ ಹೂಡಾ ವಿರುದ್ದ ಶಿಸ್ತು ಕ್ರಮ ತೆಗೆದುಕೊಂಡಿತ್ತು.
ಇನ್ನೇನು ತನ್ನ ಕ್ರಿಕೆಟ್ ಬದುಕು ಮುಗಿದು ಹೋಯ್ತು ಅಂತ ದೀಪಕ್ ಹೂಡಾ ಭಾವಿಸಿದ್ದರು. ಆದ್ರೆ ದೇವರ ದಯೆಯಿಂದ ದೀಪಕ್ ಹೂಡಾ ಅವರ ನೆರವಿಗೆ ಧಾವಿಸಿದ್ದು ಪಠಾಣ್ ಬ್ರದರ್ಸ್. ಅದರಲ್ಲೂ ಟೀಮ್ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್ ಸಹೋದರನಂತೆ ದೀಪಕ್ ಹೂಡಾ ಅವರಿಗೆ ಧೈರ್ಯ ತುಂಬಿದ್ರು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ದೀಪಕ್ ಹೂಡಾ ಜೊತೆಗೆ ನೆಟ್ಸ್ ನಲ್ಲಿ ತಾಲೀಮು ನಡೆಸಿದ್ರು. ಅಷ್ಟೇ ಅಲ್ಲ, ಬರೋಡಾ ತಂಡದ ಬದಲು ರಾಜಸ್ತಾನ ತಂಡದ ಪರ ಆಡುವಂತೆ ಸಲಹೆ ನೀಡಿದ್ದಲ್ಲದೆ ಮಾರ್ಗದರ್ಶನ ಕೂಡ ನೀಡಿದ್ರು.
ನಂತರ ಹಿಂತಿರುಗಿ ನೋಡಲೇ ಇಲ್ಲ. ರಾಜಸ್ತಾನ ತಂಡದ ಪರ ಕಣಕ್ಕಿಳಿದ ದೀಪಕ್ ಹೂಡಾ ಅವರು ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಗರಿಷ್ಠ ರನ್ ದಾಖಲಿಸಿದ್ದ ಎರಡನೇ ಆಟಗಾರನಾಗಿ ಹೊರಹೊಮ್ಮಿದ್ರು. ಅಷ್ಟೇ ಅಲ್ಲ, ವಿಜಯ ಹಜಾರೆ ಟೂರ್ನಿಯಲ್ಲಿ ರಾಜಸ್ತಾನ ತಂಡದ ನಾಯಕತ್ವವನ್ನು ವಹಿಸಿದ್ದಲ್ಲದೆ ಕರ್ನಾಟಕದ ವಿರುದ್ದ ಶತಕ ದಾಖಲಿಸಿ ಮಿಂಚು ಹರಿಸಿದ್ದರು.
ಇದೀಗ ಆಲ್ ರೌಂಡರ್ ಕೋಟಾದಲ್ಲಿ ಟೀಮ್ ಇಂಡಿಯಾದ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಂಡ್ಯ ಬದ್ರರ್ಸ್ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಅಲ್ಲದೆ ತನ್ನ ಪ್ರತಿಭೆ ಮತ್ತು ಸಾಮಥ್ರ್ಯದಿಂದಲೇ ಸೈಲೆಂಟ್ ಆಗಿಯೇ ಪಾಂಡ್ಯ ಬ್ರದರ್ಸ್ ಗೆ ಟಕ್ಕರ್ ಕೊಟ್ಟಿದ್ದಾರೆ.
ಅಂದ ಹಾಗೇ ದೀಪಕ್ ಹೂಡಾ ಅವರು ದುಡ್ಡಿಗಾಗಿ ಕ್ರಿಕೆಟ್ ಆಡಲಿಲ್ಲ. ದುಡ್ಡು ಅವರಿಗೆ ಬೇಕಾಗಿಲ್ಲ. ವಾಯು ಸೇನೆಯ ಅಧಿಕಾರಿಯ ಮಗನಾಗಿರುವ ದೀಪಕ್ ಹೂಡಾ ಅವರಿಗೆ ಕ್ರಿಕೆಟ್ ಆಟ ಬಿಟ್ಟು ಬೇರೆ ಏನು ಗೊತ್ತಿಲ್ಲ. ಕ್ರಿಕೆಟ್ ಆಡಬೇಕು. ಗೆಲುವು ಸಾಧಿಸಬೇಕು. ಇದೆ ಅವರ ಬದುಕಿನ ಗುರಿ. ಯಾವತ್ತಿಗೂ ದುಡ್ಡಿನ ಮುಂದೆ ಹೊಗಲಿಲ್ಲ. ರಾಜಸ್ತಾನ ತಂಡದ ಪರ ಆಡುವಾಗಲೂ ನನಗೆ ಇಷ್ಟೇ ಹಣ ನೀಡಬೇಕು ಎಂದು ಕೇಳಲಿಲ್ಲ. ಜಾಹಿರಾತುಗಳಲ್ಲಿ ನಟಿಸಲಿಲ್ಲ. ಹೀಗೆ ಕ್ರಿಕೆಟ್ ಆಡುವುದೇ ತನ್ನ ಕಾಯಕ ಎಂಬ ನಂಬಿಕೆಯನ್ನಿಟ್ಟುಕೊಂಡಿರುವ ದೀಪಕ್ ಹೂಡಾ ಇದೀಗ ಸಿಕ್ಕ ಅವಕಾಶವನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. Baroda
Rajasthan
ಈ ನಡುವೆ ದೀಪಕ್ ಹೂಡಾ ಅವರನ್ನು ಕಂಡ್ರೆ ಇರ್ಫಾನ್ ಪಠಾಣ್ ಗೆ ತುಂಬಾನೇ ಪ್ರೀತಿ. ದೀಪಕ್ ಕ್ರಿಕೆಟ್ ಬದುಕಿನ ಪ್ರತಿ ಹೆಜ್ಜೆಯಲ್ಲೂ ಇರ್ಫಾನ್ ಪಠಾಣ್ ಮತ್ತು ಯುಸೂಫ್ ಪಠಾಣ್ ನೆರಳಿದೆ. ಬಿಡುವಿನ ವೇಳೆಯಲ್ಲಿ ದೀಪಕ್ ಹೂಡಾ ಅವರು ಬರೋಡಾ ಕ್ರಿಕೆಟ್ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಯಾಕಂದ್ರೆ ಬರೋಡಾ ಕ್ರಿಕೆಟ್ ಸಂಸ್ಥೆ ದೀಪಕ್ ಹೂಡಾ ಅವರ ಕ್ರಿಕೆಟ್ ಬದುಕನ್ನು ರೂಪಿಸಿದೆ ಎಂಬ ಕೃತಜ್ಞತೆ ಅವರಲ್ಲಿತ್ತು. ಬರೋಡಾ ಜೊತೆಗಿನ 9 ವರ್ಷಗಳ ಸಂಬಂಧವನ್ನು ಕಡಿದುಕೊಂಡಾಗ ಸಾಕಷ್ಟು ನೋವು ಅನುಭವಿಸಿದ್ದರು ಎಂಬುದನ್ನು ಇರ್ಫಾನ್ ಪಠಾಣ್ ನೆನಪಿಸಿಕೊಳ್ಳುತ್ತಾರೆ.
Deepak Hooda never spoke money – He’s a kid in a candy store
ಇನ್ನೊಂದೆಡೆ ಇರ್ಫಾನ್ ಪಠಾಣ್ ಅವರು ದೀಪಕ್ ಹೂಡಾ ಅವರನ್ನು ಕ್ಯಾಂಡಿಯನ್ನು ನೋಡಿದಾಗ ಮಗು ಹೇಗೆ ಆಸೆ ಪಡುತ್ತೆ. ಅದೇ ರೀತಿ ದೀಪಕ್ ಹೂಡಾ ಕೂಡ ಎಂದು ಹೇಳಿದ್ದಾರೆ. ದೀಪಕ್ ಹೂಡಾ ಅವರಿಗೆ ಕ್ರಿಕೆಟ್ ಅಂದ್ರೆ ಚಾಕೋಲೆಟ್ ಇದ್ದಂಗೆ. ಕ್ರಿಕೆಟ್ ಆಟವನ್ನು ಅಷ್ಟೊಂದು ಇಷ್ಟಪಡುತ್ತಾರೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಇನ್ನೊಂದೆಡೆ ದೀಪಕ್ ಹೂಡಾ ಅವರು ಟೀಮ್ ಇಂಡಿಯಾಗೆ ಆಯ್ಕೆಯಾದಾಗ ಪಠಾಣ್ ಬ್ರದರ್ಸ್ ಅವರ ಸಹಾಯವನ್ನು ಸ್ಮರಿಸಿಕೊಂಡಿದ್ದಾರೆ.
ಮತ್ತೊಂದೆಡೆ ರಾಜಸ್ತಾನ ಕ್ರಿಕೆಟ್ ಸಂಸ್ಥೆಯು ಕೂಡ ದೀಪಕ್ ಹೂಡಾ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ. ದೀಪಕ್ ಹೂಡಾ ರಾಜಸ್ತಾನ ತಂಡ ಸೇರಿಕೊಂಡಾಗ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ಅನುಭವಿ ಆಟಗಾರನಾಗಿ ತಂಡದ ಆಟಗಾರರಿಗೆ ಸ್ಪೂರ್ತಿಯನ್ನು ನೀಡಿದ್ದಾರೆ. ಅಲ್ಲದೆ ಒಬ್ಬ ಆಟಗಾರನಾಗಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಇದೀಗ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವುದು ನಮಗೆ ಹೆಮ್ಮೆಯನ್ನುಂಟು ಮಾಡಿದೆ ಅಂತಾರೆ ರಾಜಸ್ತಾನ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮಹೇಂದರ್ ಶರ್ಮಾ.
ಒಟ್ಟಿನಲ್ಲಿ ಕ್ರಿಕೆಟ್ ಬದುಕಿನ ಏರಿಳಿತಗಳನ್ನು ಕಂಡಿರುವ ದೀಪಕ್ ಹೂಡಾ ಅವರು ಈಗ ರಾಹುಲ್ ದ್ರಾವಿಡ್ ಗರಡಿಯನ್ನು ಸೇರಿಕೊಂಡಿದ್ದಾರೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಯಶಸ್ಸಿನ ಹಾದಿಯಲ್ಲಿ ದೀಪಕ್ ಹೂಡಾ ಮುನ್ನಡೆಯಲಿ. ಆಲ್ ದಿ ಬೆಸ್ಟ್ ದೀಪಕ್ ಹೂಡಾ..!