ಕರ್ನಾಟಕದ ಆಟಗಾರರ ಸಾಂಘಿಕ ಪ್ರದರ್ಶನದಿಂದ ರೈಲ್ವೇಸ್ ವಿರುದ್ಧ ನಡೆದ ರಣಜಿ ಟ್ರೋಫಿ ಎಲೈಟ್ ‘ಸಿ’ ಗುಂಪಿನ ಪಂದ್ಯ ಯಾವುದೇ ಫಲಿತಾಂಶ ಕಾಣದೆ ಡ್ರಾನಲ್ಲಿ ಅಂತ್ಯಗೊಂಡಿದ್ದು, ಆ ಮೂಲಕ ಕರ್ನಾಟಕ 3 ಅಂಕಗಳೊಂದಿಗೆ ತನ್ನ ಖಾತೆ ತೆರೆದಿದೆ.
ಚೆನ್ನೈನ ಇಂಡಿಯಾ ಸಿಮೆಂಟ್ ಲಿಮಿಟೆಡ್ ಗುರುನಾನಕ್ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದ ನಾಲ್ಕನೇ ಹಾಗೂ ಕೊನೆಯ ದಿನವೂ ಕರ್ನಾಟಕದ ಆಟಗಾರರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಆ ಮೂಲಕ ಎರಡನೇ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿದ್ದ ವೇಳೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ ಮೊದಲ ಇನ್ನಿಂಗ್ಸ್ ನಲ್ಲಿ ದೊರೆತ 55 ರನ್ ಗಳ ಮುನ್ನಡೆಯೊಂದಿಗೆ ಎದುರಾಳಿ ತಂಡಕ್ಕೆ 279 ರನ್ ಗಳ ಟಾರ್ಗೆಟ್ ನೀಡಿತು.
ಬಳಿಕ ಕರ್ನಾಟಕ ನೀಡಿದ ಸವಾಲು ಎದುರಿಸುವ ನಿಟ್ಟಿನಲ್ಲಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ರೈಲ್ವೇಸ್ ತಂಡಕ್ಕೆ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಎದುರಾಯಿತು. ರೈಲ್ವೇಸ್ ಪರ ಇನ್ನಿಂಗ್ಸ್ ಆರಂಭಿಸಿದ ಮೃನಾಲ್ ದೇವಧಾರ್(20), ವಿವೇಕ್ ಸಿಂಗ್(18) ಹಾಗೂ ಶಿವಂ ಚೌಧರಿ(2) ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಇದರ ಬೆನ್ನಲ್ಲೇ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದ ಅರೀಂದಮ್ ಘೋಷ್(0) ಡಕೌಟ್ ಆಗಿ ಹೊರ ನಡೆದರು. ಆದರೆ ಮೊಹಮ್ಮದ್ ಸೈಫ್(27*) ತಂಡದ ಬೆನ್ನೆಲುಬಾಗಿ ನಿಂತರಾದರೂ, ಅಂತಿಮವಾಗಿ ರೈಲ್ವೇಸ್ 33 ಓವರ್ಗಳಲ್ಲಿ 4 ವಿಕೆಟ್ಗೆ 69 ರನ್ಗಳಿಸಲಷ್ಟೇ ಶಕ್ತವಾದ ಹಿನ್ನೆಲೆ, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಕರ್ನಾಟಕದ ಪರ ವೈಶಾಖ್ ವಿಜಯ್ಕುಮಾರ್ 2, ಕೆ.ಗೌತಮ್ ಮತ್ತು ಆರ್. ಸಮರ್ಥ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ 1 ವಿಕೆಟ್ ನಷ್ಟಕ್ಕೆ 63 ರನ್ಗಳಿಂದ 4ನೇ ದಿನದಾಟ ಆರಂಭಿಸಿದ ಕರ್ನಾಟಕ ಮತ್ತೊಮ್ಮೆ ಬ್ಯಾಟಿಂಗ್ನಲ್ಲಿ ಅಬ್ಬರಿಸಿತು. ಆರಂಭಿಕ ಆಟಗಾರ ಮಯಂಕ್ ಅಗರ್ವಾಲ್(56) ಅರ್ಧಶತಕ ಬಾರಿಸಿ ಹೊರ ನಡೆದರೆ, ಅದ್ಭುತ ಆಟವಾಡಿದ ಆರ್. ಸಮರ್ಥ್(83) ತಂಡದ ಮೊತ್ತವನ್ನ ಹೆಚ್ಚಿಸಿದರು. ಇವರಿಬ್ಬರು ಔಟಾದ ಬಳಿಕ ಬಂದ ಸಿದ್ಧಾರ್ಥ್(39) ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ನಂತರ ಬಂದ ಕೆ.ಗೌತಮ್(8), ಶರತ್ ಶ್ರೀನಿವಾಸ್(0), ಶ್ರೇಯಸ್ ಗೋಪಾಲ್(8), ವೈಶಾಖ್ ವಿಜಯ್ಕುಮಾರ್(0) ಹಾಗೂ ವಿದ್ಯಾದರ್ ಪಾಟೀಲ್(0) ರನ್ಗಳಿಸುವ ಆತುರದಲ್ಲಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರೆ. ನಾಯಕ ಮನೀಷ್ ಪಾಂಡೆ(24*) ಅಜೇಯರಾಗುಳಿದರು. ರೈಲ್ವೇಸ್ ಪರ ಅಮಿತ್ ಮಿಶ್ರಾ 4, ಕರಣ್ ಶರ್ಮ 3 ವಿಕೆಟ್ ಪಡೆದು ಮಿಂಚಿದರು.
ಕರ್ನಾಟಕ ಫೆ.24ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡವನ್ನು ಎದುರಿಸಲಿದ್ದು, ಚೆನ್ನೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.