ಕಳೆದ ಐಪಿಎಲ್ನಲ್ಲಿ ತಮ್ಮ ಅದ್ಭುತ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ಯುವ ವೇಗದ ಬೌಲರ್ ಅವೇಶ್ ಖಾನ್, ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲ್ಕತ್ತಾದಲ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅವೇಶ್ ಖಾನ್, ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನಗಿಟ್ಟಿಕೊಂಡರು. ಮೂರನೇ ಪಂದ್ಯ ಆರಂಭಕ್ಕೂ ಟೀಂ ಹಡಲ್ನಲ್ಲಿ ತಂಡದ ಹಿರಿಯ ಆಟಗಾರ ಭುವನೇಶ್ವರ್ ಕುಮಾರ್, ಟೀಂ ಇಂಡಿಯಾದ ಕ್ಯಾಪ್ ನೀಡುವ ಮೂಲಕ 25 ವರ್ಷದ ಅವೇಶ್ ಖಾನ್ ಅವರಿಗೆ ಶುಭಕೋರಿದರು.
ಇದರೊಂದಿಗೆ ಪ್ರಸಕ್ತ ಸರಣಿಯಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಂಟ್ರಿಕೊಟ್ಟ ಎರಡನೇ ಆಟಗಾರ ಎನಿಸಿದರು. ಇದಕ್ಕೂ ಮುನ್ನ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಅಲ್ಲದೇ ಮೊದಲ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದ ಬಿಷ್ಣೋಯಿ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದ್ದರು.
ಐಪಿಎಲ್ನಲ್ಲಿ ಮಿಂಚಿದ್ದ ಅವೇಶ್:
ಮಧ್ಯ ಪ್ರದೇಶ ಮೂಲದ ಯುವ ವೇಗಿ ಅವೇಶ್ ಖಾನ್, ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. 2017ರಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ್ದ ಅವೇಶ್ ಖಾನ್, ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದರು. ಆದರೆ 2021ರಲ್ಲಿ ಐಪಿಎಲ್ನಲ್ಲಿ ತಮಗೆ ದೊರೆತ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಅವೇಶ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರತಿ ಪಂದ್ಯದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. 2021ರ ಐಪಿಎಲ್ನಲ್ಲಿಒಟ್ಟು 16 ಪಂದ್ಯವನ್ನು ಆಡಿದ ಅವೇಶ್ ಖಾನ್, 7.37ರ ಸರಾಸರಿಯಲ್ಲಿ 24 ವಿಕೆಟ್ ಪಡೆದು ಮಿಂಚಿದ್ದರು.
ದುಬಾರಿ ಮೊತ್ತ ಪಡೆದ ಅನ್ಕ್ಯಾಪ್ಡ್ ಪ್ಲೇಯರ್
ಐಪಿಎಲ್ಗೆ ಎಂಟ್ರಿಕೊಟ್ಟಿದ್ದ ಅವೇಶ್ ಖಾನ್, ಆರಂಭದಿಂದ ಈವರೆಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಾತ್ರವೇ ಆಡುವ ಅವಕಾಶ ಪಡೆದಿದ್ದರು. ವರ್ಷಗಳ ಹಿಂದೆ 70 ಲಕ್ಷ ರೂ.ಗಳಿಗೆ ಬಿಕರಿಯಾಗಿದ್ದ ಅವೇಶ್ ಖಾನ್, 2021ರ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಗಮನ ಸೆಳೆದಿದ್ದರು. ಪರಿಣಾಮ 2022ರ ಐಪಿಎಲ್ ಹರಾಜಿನಲ್ಲಿ ಅವೇಶ್ ಖಾನ್ ಅವರನ್ನ ಪಡೆಯಲು ಹಲವು ತಂಡಗಳು ಭಾರೀ ಪೈಪೋಟಿ ನಡೆಸಿದವು. ಅಂತವಾಗಿ 10 ಕೋಟಿಗೆ ಲಕ್ನೋ ಸೂಪರ್ಜೈಂಟ್ಸ್ ತಂಡ ಸೇರಿದ ಅವೇಶ್ ಖಾನ್, ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಕರಿಯಾದ ಅನ್ಕ್ಯಾಪ್ಡ್ ಪ್ಲೇಯರ್ ಎನಿಸಿದ್ದಾರೆ.
ಇನ್ನೂ ಪ್ರಥಮ ದರ್ಜೆ ಕ್ರಿಕೆಟ್ನಲ್ಲೂ ಮಿಂಚಿರುವ ಅವೇಶ್ ಖಾನ್, ಈವರೆಗೂ 27 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 23.42ರ ಸರಾಸರಿಯಲ್ಲಿ 100 ವಿಕೆಟ್ ಪಡೆದ್ದಾರೆ. ಅಲ್ಲದೇ 22 ಲಿಸ್ಟ್ ʼಎʼ ಪಂದ್ಯದಲ್ಲಿ 17 ವಿಕೆಟ್ ಪಡೆದಿರುವ ಅವರು, 48 ಟಿ20 ಪಂದ್ಯಗಳಲ್ಲಿ 65 ವಿಕೆಟ್ ಪಡೆದು ಗಮನ ಸೆಳೆದಿದ್ದರು.