ಭಾರತದ ಟೆನಿಸ್ ಪಟುಗಳಾದ ರಾಮಕುಮಾರ್ ರಾಮನಾಥನ್ ಹಾಗೂ ಯೂಕಿ ಭಾಂಬ್ರಿ, ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಅರ್ಹತಾ ಸ್ಪರ್ಧೆಯ ಮೊದಲ ಸುತ್ತಿನ ಪಂದ್ಯದಲ್ಲಿಯೇ ಸೋಲಿನ ಕಹಿ ಅನುಭವಿಸಿದ್ದಾರೆ.
ಸೋಮವಾರ ರಾತ್ರಿ ನಡೆದ ಅರ್ಹತಾ ಸ್ಪರ್ಧೆಯ ಮೊದಲ ಸುತ್ತಿನ ಪಂದ್ಯದಲ್ಲಿ ಯೂಕಿ ಭಾಂಬ್ರಿ, ಸ್ಪೇನ್ ಆಟಗಾರ ಬರ್ನಾಬೆ ಜಪಾಟಾ ಮಿರಾಲ್ಲೆಸ್ ವಿರುದ್ಧ ಎರಡು ನೇರ ಸೆಟ್‌ಗಳ ಆಟದಲ್ಲಿ ಸೋಲು ಅನುಭವಿಸಿದರು. ರಾಮಕುಮಾರ್ ರಾಮನಾಥನ್, ಜೆಕ್ ಗಣರಾಜ್ಯದ ವಿಟ್ ಕೊಪ್ರಿವಾ ಅವರ ಕೈಯಲ್ಲಿ ಎರಡು ನೇರ ಸೆಟ್‌ಗಳ ಆಟದಲ್ಲಿ ಸುಲಭವಾಗಿ ಶರಣಾಗಿ ನಿರಾಸೆ ಅನುಭವಿಸಿದರು.

ಸ್ಪೇನ್ ಆಟಗಾರ ಬರ್ನಾಬೆ ಜಪಾಟಾ ಮಿರಾಲ್ಲೆಸ್, ಭಾರತದ ಯೂಕಿ ಭಾಂಬ್ರಿ ಅವರನ್ನು 7-5, 6-1 ರಿಂದ ಸುಲಭವಾಗಿ
ಹಣಿದರು. ಮೊದಲ ಸೆಟ್‌ನ ಆರಂಭದಲ್ಲಿ ಉಭಯ ಆಟಗಾರರು ಸಮಬಲ ಹೋರಾಟ ನಡೆಸಿದ್ದರಿಂದ ಪ್ರತಿ ಅಂಕಕ್ಕೂ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಅಂತಿಮವಾಗಿ ಸೆಟ್‌ನ್ನು 7-5 ರಿಂದ ಗೆದ್ದ ಬರ್ನಾಬೆ ಮುನ್ನಡೆದರು. ಎರಡನೇ ಸೆಟ್‌ನಲ್ಲಿ ಆರಂಭದಿಂದಲೇ ಸಂಪೂರ್ಣ ಮೇಲುಗೈ ಸಾಧಿಸಿದ ಸ್ಪೇನ್ ಆಟಗಾರ ಬರ್ನಾಬೆ, ಹೆಚ್ಚಿನ ಪರಿಶ್ರಮವಿಲ್ಲದೇ 6-1 ರಿಂದ ಜಯಿಸಿದರು.
ಜೆಕ್ ಗಣರಾಜ್ಯದ ವಿಟ್ ಕೊಪ್ರಿವಾ 7-5, 6-4 ರಿಂದ ರಾಮಕುಮಾರ್ ರಾಮನಾಥನ್ ಅವರನ್ನು ಎರಡು ನೇರ ಸೆಟ್‌ಗಳ ಆಟದಲ್ಲಿ ಪರಾಜಯಗೊಳಿಸಿದರು.
ಮೊದಲ ಸೆಟ್‌ನಲ್ಲಿ ಎದುರಾಳಿಯಿಂದ ಪೈಪೋಟಿ ಎದುರಿಸಿದ ವಿಟ್ ಕೊಪ್ರಿವಾ, ನಂತರ ಸೆಟ್ ಮೇಲೆ ಹಿಡಿತ ಸಾಧಿಸಿ 7-5 ರಿಂದ ಗೆದ್ದು, 1-0 ರ ಮುನ್ನಡೆ ಸಾಧಿಸಿದರು. ಎರಡನೇ ಸೆಟ್‌ನ ಆರಂಭದಲ್ಲಿ ವಿಟ್ ಕೊಪ್ರಿವಾ, ಎದುರಾಳಿ ರಾಮಕುಮಾರ್ ರಾಮನಾಥನ್ ಅವರಿಂದ ಪ್ರತಿರೋಧ ಎದುರಿಸಿದರೂ ಅಂತಿಮವಾಗಿ ಸೆಟ್‌ನ್ನು 6-4 ರಿಂದ ಜಯಿಸಿದರು.

ಅರ್ಹತಾ ಸ್ಪರ್ಧೆಯ ಮೊದಲ ಸುತ್ತಿನ ಪಂದ್ಯದಲ್ಲಿಯೇ ರಾಮಕುಮಾರ್ ರಾಮನಾಥನ್ ಹಾಗೂ ಯೂಕಿ ಭಾಂಬ್ರಿ ಸೋಲುವುದರೊಂದಿಗೆ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮುಖ್ಯ ಸುತ್ತಿನ ಆಡುವ ಅರ್ಹತೆಯಿಂದ ವಂಚಿತರಾದರು.
35 ವರ್ಷ ವಯಸ್ಸಿನ ಸಾನಿಯಾ ಮಿರ್ಜಾ, ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮುಖ್ಯ ಸುತ್ತಿನಲ್ಲಿ ಸೆಣಸಾಟ ನಡೆಸಲಿರುವ ಏಕೈಕ ಭಾರತೀಯ ಟೆನಿಸ್ ಪಟು ಎನಿಸಿದ್ದಾರೆ.
ಸಾನಿಯಾ ಮಿರ್ಜಾ, ಮಹಿಳಾ ವಿಭಾಗದ ಡಬಲ್ಸ್ ನಲ್ಲಿ ಹೋರಾಟ ನಡೆಸಲಿದ್ದಾರೆ. ರೋಹನ್ ಬೋಪಣ್ಣ, ಸ್ಪರ್ಧೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.