ಕೊನೆ ಹಂತದವರೆಗೂ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ 4 ರನ್ಗಳ ರೋಚಕ ಗೆಲುವು ಸಾಧಿಸಿದೆ. ಆ ಮೂಲಕ ಅತಿಥೇಯ ತಂಡ ಐದು ಪಂದ್ಯಗಳ ಸರಣಿಯಲ್ಲಿ 3-1ರ ಮುನ್ನಡೆಯೊಂದಿಗೆ ಸರಣಿ ತನ್ನದಾಗಿಸಿಕೊಂಡಿದೆ.
ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 49 ಓವರ್ ಗಳಲ್ಲಿ 258 ರನ್ ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, 50 ಓವರ್ಗಳಲ್ಲಿ 254 ರನ್ ಗಳಿಗೆ ಆಲೌಟ್ ಆಗುವ ಮೂಲಕ 4 ರನ್ ಗಳ ವಿರೋಚಿತ ಸೋಲು ಕಂಡಿತು. ಈ ಗೆಲುವಿನೊಂದಿಗೆ ಶ್ರೀಲಂಕಾ, ಇನ್ನು ಒಂದು ಪಂದ್ಯ ಬಾಕಿಯಿರುವಂತೆಯೇ ಸರಣಿ ವಶಪಡಿಸಿಕೊಂಡಿತು.
ಅಸಲಂಕ ಶತಕದ ಆಸರೆ
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಶ್ರೀಲಂಕಾ, ನಿರೀಕ್ಷಿತ ಆರಂಭ ಪಡೆಯಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಡಿಕ್ವಿಲ್ಲಾ(1) ಹಾಗೂ ಕಳೆದ ಪಂದ್ಯದ ಹೀರೋ ಪತುಮ್ ನಿಸ್ಸಂಕ(13) ಬಹುಬೇಗನೆ ಔಟಾದರು. ನಂತರ ಬಂದ ಕುಸಲ್ ಮೆಂಡಿಸ್(14) ಸಹ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಈ ಹಂತದಲ್ಲಿ ಜೊತೆಯಾದ ಧನಂಜಯ ಡಿಸಿಲ್ವಾ(60) ಹಾಗೂ ಚರಿತ್ ಅಸಲಂಕ(110) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆಸೀಸ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ, 4ನೇ ವಿಕೆಟ್ ಜೊತೆಯಾಟದಲ್ಲಿ 101 ರನ್ ಕಲೆಹಾಕಿತು. ಉತ್ತಮವಾಗಿ ಆಡುತ್ತಿದ್ದ ಧನಂಜಯ ಡಿಸಿಲ್ವಾ, ಅರ್ಧಶತಕ ಸಿಡಿಸಿ ಹೊರನಡೆದರೆ, ಅಸಲಂಕ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಆದರೆ ಇವರಿಬ್ಬರ ವಿಕೆಟ್ ಪತನದ ನಂತರ ಬಂದವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಪರಿಣಾಮ ಶ್ರೀಲಂಕಾ 49 ಓವರ್ಗಳಲ್ಲಿ 258ಕ್ಕೆ ಆಲೌಟ್ ಆಯಿತು. ಆಸೀಸ್ ಪರ ಮಾರ್ಷ್, ಕಮ್ಮಿನ್ಸ್ ಹಾಗೂ ಕುನೆಮನ್ ತಲಾ 2 ವಿಕೆಟ್ ಪಡೆದರು.
ವಾರ್ನರ್ ವ್ಯರ್ಥ ಹೋರಾಟ
ಶ್ರೀಲಂಕಾ ನೀಡಿದ 259 ರನ್ ಗುರಿ ಬೆನ್ನತ್ತಿದ ಆಸ್ಟ್ರೀಲಿಯಾಕ್ಕೆ ಬ್ಯಾಟಿಂಗ್ ವೈಫಲ್ಯ ಎದುರಾಯಿತು. ಇನ್ನಿಂಗ್ಸ್ ಆರಂಭಿಸಿದ ನಾಯಕ ಫಿಂಚ್(0) ಯಾವುದೇ ರನ್ಗಳಿಸದೆ ಹೊರನಡೆದರೆ. ನಂತರ ಬಂದ ಮಿಚೆಲ್ ಮಾರ್ಷ್(26), ಲಬುಸ್ಚೆಗ್ನೆ(14), ಅಲೆಕ್ಸ್ ಕ್ಯಾರಿ(19) ಹಾಗೂ ಟ್ರಾವಿಸ್ ಹೆಡ್(27) ಅಲ್ಪಮೊತ್ತದ ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಆದರೆ ಒಂದೆಡೆ ವಿಕೆಟ್ ಬೀಳುತ್ತಿದ್ದರು ಧೃತಿಗೆಡದ ಡೇವಿಡ್ ವಾರ್ನರ್, ಲಂಕಾ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದರು. ಉತ್ತಮವಾಗಿ ಆಡುತ್ತಿದ್ದ ವಾರ್ನರ್(99) ರನ್ ಗಳಿಗೆ ಔಟಾಗುವ ಮೂಲಕ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಕ್ಸ್ವೆಲ್(1), ಕೆಮರೂನ್ ಗ್ರೀನ್(13) ಸಹ ನಿರೀಕ್ಷಿತ ಆಟವಾಡಲಿಲ್ಲ. ಈ ಹಂತದಲ್ಲಿ ಜೊತೆಯಾದ ಪ್ಯಾಟ್ ಕಮ್ಮಿನ್ಸ್(35) ಹಾಗೂ ಕುನೆಮನ್(15) ತಂಡವನ್ನ ಗೆಲುವಿನ ಹೊಸ್ತಿಲಿಗೆ ತರುವಲ್ಲಿ ಯಶಸ್ವಿಯಾದರು, ಗೆಲುವು ಸಿಗಲಿಲ್ಲ. ಪರಿಣಾಮ 50 ಓವರ್ ಗಳಲ್ಲಿ 254 ರನ್ ಗಳಿಸಿದ ಆಸೀಸ್, 4 ರನ್ಗಳ ವಿರೋಚಿತ ಸೋಲು ಕಂಡಿತು. ಲಂಕಾ ಪರ ಕರುಣಾರತ್ನೆ, ಧನಂಜಯ ಹಾಗೂ ವೆಂಡರ್ಸೆ ತಲಾ 2 ವಿಕೆಟ್ ಪಡೆದರು.