ರಾಫೆಲ್ ನಡಾಲ್ ಇತಿಹಾಸ ನಿರ್ಮಿಸಿದ್ದಾರೆ. 35ರ ಹರೆಯದ ಸ್ಪೇನ್ ನ ಟೆನಿಸ್ ಆಟಗಾರ ಆಸ್ಟ್ರೇಲಿಯನ್ ಓಪನ್ ಫೈನಲ್ನಲ್ಲಿ ಐದು ಸೆಟ್ಗಳ ಹೋರಾಟದಲ್ಲಿ 25 ವರ್ಷದ ರಷ್ಯಾದ ಸ್ಟಾರ್ ಡೇನಿಯಲ್ ಮೆಡ್ವೆಡೆವ್ ಅವರನ್ನು 2-6, 6-7, 6-4, 6-4, 7-5 ಸೆಟ್ಗಳಿಂದ ಸೋಲಿಸಿದರು.
ಇದು ನಡಾಲ್ ವೃತ್ತಿಜೀವನದ ಎರಡನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಮತ್ತು ಒಟ್ಟಾರೆ 21 ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ. ಫೈನಲ್ ಪಂದ್ಯ 5 ಗಂಟೆ 24 ನಿಮಿಷಗಳ ಕಾಲ ನಡೆಯಿತು.
ನಡಾಲ್ 145 ವರ್ಷಗಳ ಗ್ರ್ಯಾನ್ ಸ್ಲಾಮ್ ಇತಿಹಾಸದಲ್ಲಿ ಅತಿ ಹೆಚ್ಚು ಪುರುಷರ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಕ್ ಅವರನ್ನು ಹಿಂದಿಕ್ಕಿದರು. ಇಬ್ಬರೂ 20-20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಹೊಂದಿದ್ದಾರೆ.
2009 ರಿಂದ ನಡಾಲ್ ಎರಡನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದಾರೆ. 2009 ರಲ್ಲಿ, ನಡಾಲ್ ಫೈನಲ್ನಲ್ಲಿ ರೋಜರ್ ಫೆಡರರ್ ಅವರನ್ನು ಸೋಲಿಸಿದ್ದರು. ಆ ಅಂತಿಮ ಪಂದ್ಯವೂ ಐದು ಸೆಟ್ಗಳವರೆಗೆ ನಡೆಯಿತು. ಆದರೆ, ಅದರ ನಂತರ ನಡಾಲ್ ಈ ಟೂರ್ನಿಯ ಫೈನಲ್ನಲ್ಲಿ ನಾಲ್ಕು ಬಾರಿ ಸೋಲನ್ನು ಕಂಡಿದ್ದರು. ಅಂತಿಮವಾಗಿ, 13 ವರ್ಷಗಳ ಕಾಯುವಿಕೆಯ ನಂತರ, ರಾಫೆಲ್ ನಡಾಲ್ ಮತ್ತೆ ಆಸ್ಟ್ರೇಲಿಯನ್ ಓಪನ್ ಗೆದ್ದರು.
ಅಂತಿಮ ಪಂದ್ಯದ ಮೊದಲ ಸೆಟ್ ಮೆಡ್ವೆಡೆವ್ ಪಾಲಾಯಿತು. ಅವರು ನಡಾಲ್ ಅವರನ್ನು 6-2 ರಿಂದ ಸೋಲಿಸಿದರು. ಇಬ್ಬರ ನಡುವಿನ ಎರಡನೇ ಸೆಟ್ ರೋಚಕವಾಗಿತ್ತು. ಇಬ್ಬರೂ ಆಟಗಾರರು ಎರಡು ಬಾರಿ ಪರಸ್ಪರರ ಸರ್ವನ್ನು ಮುರಿದರು. ಒಂದು ಹಂತದಲ್ಲಿ, ನಡಾಲ್ 4-2 ರಿಂದ ಮುನ್ನಡೆಯಲ್ಲಿದ್ದರು, ಆದರೆ ಟೈಬ್ರೇಕರ್ನಲ್ಲಿ ಮೆಡ್ವೆಡೆವ್ 7-6(7-5) ಸೆಟ್ಗಳನ್ನು ಗೆದ್ದರು.
ಮೊದಲ ಎರಡು ಸೆಟ್ಗಳಲ್ಲಿನ ಸೋಲಿನ ನಂತರ, ರಾಫೆಲ್ ಭರ್ಜರಿಯಾಗಿ ಪುಟಿದೆದ್ದರು. ಸತತ ಎರಡು ಸೆಟ್ಗಳನ್ನು ಗೆದ್ದು ಪಂದ್ಯವನ್ನು ಅಂತಿಮ ಸೆಟ್ಗೆ ಕೊಂಡೊಯ್ದರು. ನಡಾಲ್ ಮೂರು ಮತ್ತು ನಾಲ್ಕನೇ ಸೆಟ್ಗಳನ್ನು 6-4 ರಿಂದ ಗೆದ್ದರು. ಅಂತಿಮ ಸೆಟ್ ನಲ್ಲೂ ಛಲ ಬಿಡದ ಮೆಡ್ವೆಡೆವ್ ನಡಾಲ್ ವಿರುದ್ಧ ತೀವ್ರ ಸೆಣಸಾಟ ನಡೆಸಿದರಾದರೂ, ಕೊನೆಗೆ ಮತ್ತೊಮ್ಮೆ ರಾಫೆಲ್ ನಡಾಲ್ ಕೈ ಮೇಲಾಯಿತು. ಕೊನೆಯ ಸೆಟ್ ಅನ್ನು 7-5 ರಿಂದ ಗೆದ್ದು ತಮ್ಮ ವೃತ್ತಿ ಜೀವನದ 21ನೇ ಗ್ರ್ಯಾನ್ ಸ್ಲಾಮ್ ಗೆದ್ದರು.