Rafael Nadal – 21 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳ ಹಿಂದಿದೆ ಬರೀ ನೋವು.. ನೋವು.. ನೋವು..!
ರಫೆಲ್ ನಡಾಲ್… 21 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳ ಒಡೆಯ. 2022ರ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ವಿಶ್ವ ಟೆನಿಸ್ ಜಗತ್ತಿನಲ್ಲಿ ಹೊಸ ಅಧ್ಯಾಯವನ್ನೇ ಬರೆದಿದ್ದಾರೆ.
ಕಳೆದ 18 ವರ್ಷಗಳಿಂದ ಟೆನಿಸ್ ಜಗತ್ತನ್ನು ಆಳುತ್ತಿರುವುದು ತ್ರಿಮೂರ್ತಿಗಳಾದ ರೋಜರ್ ಫೆಡರರ್, ರಫೆಲ್ ನಡಾಲ್ ಮತ್ತು ನೊವಾಕ್ ಜಾಕೊವಿಕ್.
ರೋಜರ್ ಫೆಡರರ್ ಅವರು 2003ರಿಂದ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯ ಬೇಟೆ ಶುರು ಮಾಡಿದ್ರೆ, ರಫೆಲ್ ನಡಾಲ್ 2005ರಿಂದ ಹಾಗೂ ನೊವಾಕ್ ಜಾಕೊವಿಕ್ 2008ರಿಂದ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಶುರು ಮಾಡಿದ್ದರು.
ರಫೆಲ್ ನಡಾಲ್ ಅವರು 2022ರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವುದಕ್ಕಿಂತ ಮುನ್ನ ಫೆಡರರ್ ಮತ್ತು ಜಾಕೊವಿಕ್ ಜೊತೆ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಇದೀಗ 21ನೇ ಪ್ರಶಸ್ತಿ ಅವರ ಮುಡಿ ಸೇರಿಕೊಂಡಿದೆ. ಇನ್ನು ಮುಂದಿನ ಟಾರ್ಗೆಟ್ ಫ್ರೆಂಚ್ ಓಪನ್. ಫ್ರೆಂಚ್ ಓಪನ್ ಟೂರ್ನಿಯಲ್ಲಿ 13 ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಕಳೆದ ವರ್ಷ ನಡಾಲ್ ಫ್ರೆಂಚ್ ಓಪನ್ ನಲ್ಲಿ ಆಡಿರಲಿಲ್ಲ. ಒಟ್ಟಿನಲ್ಲಿ ರಫೆಲ್ ನಡಾಲ್ ಅವರ ಮುಂದಿನ ಟಾರ್ಗೆಟ್ 25 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವುದು.
ಆದ್ರೆ ಇದು ಸಾಧ್ಯನಾ ಅನ್ನೋ ಪ್ರಶ್ನೆ ಮತ್ತು ಸವಾಲು ನಡಾಲ್ ಮುಂದಿದೆ. ಯಾಕಂದ್ರೆ ರಫೆಲ್ ನಡಾಲ್ ಅವರ ವೃತ್ತಿ ಬದುಕು ಟೆನಿಸ್ ನಲ್ಲಿ ಎಷ್ಟು ಸಂಭ್ರಮಪಟ್ಟಿದ್ದಾರೋ ಅಷ್ಟೇ ನೋವು ಕೂಡ ಅನುಭವಿಸಿದ್ದಾರೆ.
2005ರಿಂದ ಇಲ್ಲಿಯವರೆಗೆ ರಫೆಲ್ ನಡಾಲ್ ಅವರನ್ನು ಕಾಡಿದ್ದು ಬರೀ ಗಾಯದ ಸಮಸ್ಯೆ. ಸ್ನಾಯು ಸೆಳೆತ, ಮೊಣಕಾಲು ನೋವು, ಪಾದ ನೋವು, ಬೆನ್ನು ನೋವು, ಕೈ ನೋವು, ಭುಜ ನೋವು ಹೀಗೆ ನೋವಿನ ಜೊತೆ ಹೋರಾಡಿಕೊಂಡೇ 21 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಮನೆಯ ಶೋಕೆಷ್ ನಲ್ಲಿಟ್ಟಿದ್ದಾರೆ.
ಕಳೆದ ವರ್ಷವಂತೂ ನಡಾಲ್ ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್ ಕೂಡ ಆಡಿರಲಿಲ್ಲ. ಇನ್ನೇನೂ ತನ್ನ ಟೆನಿಸ್ ಬದುಕು ಮುಗಿದು ಹೋಯ್ತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಚೇತರಿಸಿಕೊಂಡಿದ್ದಾರೆ. ಮೆಲ್ಬರ್ನ್ ಪಾರ್ಕ್ ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
ಇನ್ನೊಂದೆಡೆ ಗಾಯದ ಸಮಸ್ಯೆಯಿಂದಾಗಿ ಹಲವು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಟೂನಿಗಳಿಂದ ವಂಚಿತರಾಗಿದ್ದರು. ಆದ್ರೂ ಈ ಬಗ್ಗೆ ತಲೆಕೆಡಿಸಿಕೊಳ್ಳದ ನಡಾಲ್, ಚೇತರಿಸಿಕೊಂಡ ತಕ್ಷಣವೇ ಅಂಗಣಕ್ಕಿಳಿಯುತ್ತಿದ್ದರು. ಜೊತೆಗೆ ತನ್ನ ಪ್ರಶಸ್ತಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು.
ಅದ್ರಲ್ಲೂ ಆವೆ ಮಣ್ಣಿನ ಫ್ರೆಂಚ್ ಓಪನ್ ನಲ್ಲಿ 13 ಬಾರಿ ಪ್ರಶಸ್ತಿ ಗೆದ್ದುಕೊಂಡು ಕ್ಲೇ ಕೋರ್ಟ್ ಕಿಂಗ್ ಅಂತನೇ ಫೇಮಸ್ ಆಗಿದ್ದಾರೆ. ಇನ್ನು ರೋಜರ್ ಫೆಡರರ್ ಮತ್ತು ನಡಾಲ್ ಅವರ ಹೋರಾಟವನ್ನು ನೋಡುವುದೆ ಚೆಂದ, ಜಿದ್ಸಾಜಿದ್ದಿನ ಹೋರಾಟ ಟೆನಿಸ್ ಅಭಿಮಾನಿಗಳ ಮನವನ್ನು ತಣಿಸುತ್ತದೆ. ಗೆಲುವಿಗಾಗಿ ಗಂಟೆ ಗಟ್ಟಲೇ ಸ್ಪರ್ಧೆ ಮಾಡುತ್ತಾರೆ. ಅಂಗಣದಲ್ಲಿ ಬದ್ದವೈರಿಗಳಾದ್ರೂ ಅಂಗಣದಿಂದ ಹೊರಗಡೆ ಆತ್ಮಿಯ ಸ್ನೇಹಿತರು ಕೂಡ.
ಒಟ್ಟಿನಲ್ಲಿ ದೇಹ ಪೂರ್ತಿ ನೋವು ಆವರಿಸಿಕೊಂಡ್ರೂ ಕ್ಯಾರೇ ಅನ್ನದೇ ಗೆಲುವಿಗಾಗಿ ಹೋರಾಟ ನಡೆಸುತ್ತಿರುವ ರಫೆಲ್ ನಡಾಲ್ ಅವರ ಬದ್ದತೆ, ಆಕ್ರಮಣಕಾರಿ ಪ್ರವೃತ್ತಿ, ಹೋರಾಟದ ಮನೋಭಾವನೆ ಎಲ್ಲರಿಗೂ ಸ್ಪೂರ್ತಿ ನೀಡುತ್ತದೆ.