ATP Rankings- ಜಾಕೊವಿಕ್ ನಂಬರ್ ವನ್… 30ನೇ ಸ್ಥಾನಕ್ಕೆ ಕುಸಿದ ರೋಜರ್ ಫೆಡರರ್

ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. 20 ಗ್ರ್ಯಾಂಡ್ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ನೊವಾಕ್ ಜಾಕೊವಿಕ್ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಿರಲಿಲ್ಲ.
ಕೋವಿಡ್ ಲಸಿಕೆ ವಿಚಾರದಲ್ಲಿ ನೊವಾಕ್ ಜಾಕೊವಿಕ್ ಅವರಿಗೆ ಆಸ್ಟ್ರೇಲಿಯಾ ಸರ್ಕಾರ ಮತ್ತು ಆಸ್ಟ್ರೇಲಿಯನ್ ಓಪನ್ ಸಂಘಟಕರು ಟೂರ್ನಿಯಲ್ಲಿ ಆಡುವ ಅವಕಾಶವನ್ನು ನೀಡಲಿಲ್ಲ. ಆದ್ರೂ ಜಾಕೊವಿಕ್ ಅವರು ನಂಬರ್ ವನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ದಾಖಲೆಯ 358ನೇ ವಾರ ನಂಬರ್ ವನ್ ಸ್ಥಾನವನ್ನು ಕಾಯ್ದುಕೊಂಡಿರುವ ನೊವಾಕ್ ಜಾಕೊವಿಕ್ ಅವರು ದುಬೈ ಓಪನ್ ಟೂರ್ನಿಯಲ್ಲಿ ಆಡಲಿದ್ದಾರೆ.
ಇನ್ನು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿರುವ ಸ್ಪೇನ್ ನ ರಫೆಲ್ ನಡಾಲ್ ಅವರು ಐದನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನವನ್ನು ಆಕ್ರಮಿಸಿಕೊಳ್ಳಬೇಕಾದ್ರೆ ನಡಾಲ್ ಅವರಿಗೆ ಇನ್ನೂ 910 ಅಂಕಗಳು ಬೇಕಿದೆ.
ಇನ್ನೊಂದೆಡೆ ಟೆನಿಸ್ ಮಾಸ್ಟರ್ ಸ್ವಿಜರ್ ಲೆಂಡ್ ನ ರೋಜರ್ ಫೆಡರರ್ ಅವರು ಇದೇ ಮೊದಲ ಬಾರಿ ಟಾಪ್ -20 ಲಿಸ್ಟ್ ನಲ್ಲಿ ಕಾಣಿಸಿಕೊಂಡಿಲ್ಲ. 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಫೆಡರರ್ ಅವರು 21 ವರ್ಷದಲ್ಲಿ ಇದೇ ಮೊದಲ ಬಾರಿ ಹಿನ್ನಡೆ ಅನುಭವಿಸಿದ್ದಾರೆ. 1665 ಅಂಕಗಳನ್ನು ಪಡೆದುಕೊಂಡಿರುವ ಫೆಡರರ್ ಅವರು 30ನೇ ಸ್ಥಾನಕ್ಕಿಳಿದಿದ್ದಾರೆ.
ಗಾಯದಿಂದಾಗಿ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೂರ್ನಿಯನ್ನು ಮಿಸ್ ಮಾಡಿಕೊಂಡಿರುವ ಫೆಡರರ್ ಅವರು ಕಳೆದ ವಿಂಬಲ್ಡನ್ ಟೂರ್ನಿಯಲ್ಲಿ ಆಡಿದ್ದರು. ಆದಾದ ನಂತರ ಅವರು ಯಾವುದೇ ಟೂರ್ನಿಗಳಲ್ಲಿ ಆಡಿಲ್ಲ. ವಿಶ್ರಾಂತಿ ಪಡೆಯುತ್ತಿದ್ದಾರೆ.