PVSindhu -ಮುಂದಿನ ಟಾರ್ಗೆಟ್ ಕಾಮನ್ ವೆಲ್ತ್ ಗೇಮ್ಸ್…!

ಸಿಂಗಾಪುರದಲ್ಲಿ ಪ್ರಶಸ್ತಿ ಗೆದ್ದಿದ್ದಾಯ್ತು. ಮುಂದಿನ ಟಾರ್ಗೆಟ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆಲ್ಲುವುದು ಎಂದು ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಹೇಳಿದ್ದಾರೆ.
ಸಿಂಗಾಪುರ ಓಪನ್ ಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು 21-9, 11-21, 21-15ರಿಂದ ಚೀನಾದ ವಾಂಗ್ ಝೀ ಯಿ ಅವರನ್ನು ಸೋಲಿಸಿದ್ರು.
ಪ್ರಶಸ್ತಿ ಸ್ವೀಕರಿಸಿಕೊಂಡ ನಂತರ ಮಾತನಾಡಿದ್ದ ಸಿಂಧು ಅವರು ತಮ್ಮ ಮುಂದಿನ ಗುರಿ ಮತ್ತು ಪ್ರಶಸ್ತಿ ಗೆದ್ದ ಖುಷಿಯನ್ನು ಹಂಚಿಕೊಂಡ್ರು.
ಕಳೆದ ಕೆಲವೊಂದು ಟೂರ್ನಿಗಳಲ್ಲಿ ಕಠಿಣ ಸವಾಲುಗಳನ್ನು ಎದುರಿಸಬೇಕಾಯ್ತು. ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳಲ್ಲಿ ಸೋತಾಗ ನಿರಾಸೆಯೂ ಆಯ್ತು. ಆದ್ರೆ ಕೊನೆಗೂ ನಾನು ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದೇನೆ ಎಂದು ಹೇಳಿದ್ರು.
ನನಗೆ ತುಂಬಾ ಖುಷಿಯಾಗಿದೆ. ಬಹಳ ದಿನಗಳ ನಂತರ ಸಿಂಗಾಪುರ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದೇನೆ. ಈ ಪ್ರಶಸ್ತಿ ಮುಂದಿನ ಟೂರ್ನಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಮಾಡಿದೆ ಎಂದು ಹೇಳಿದ್ರು.

ಇದೀಗ ಈ ಸಂಭ್ರಮವನ್ನು ಅನುಭವಿಸಲು ಸಮಯದ ಅಭಾವ ಇದೆ. ಮುಂದಿನ ವಾರ ನಾವು ಕಾಮನ್ ವೆಲ್ತ್ ಗೇಮ್ಸ್ ಗೆ ಹೊರಡಬೇಕಿದೆ. ಬಹುಶಃ ನನಗೆ ಒಂದು ದಿನ ರಜೆ ಸಿಗುತ್ತೆ. ಇದರಲ್ಲಿ ನಾನು ನನ್ನ ಕುಟುಂಬದ ಜೊತೆ ಕಾಲ ಕಳೆಯುತ್ತೇನೆ. ಆ ನಂತರ ಕಾಮನ್ ವೆಲ್ಸ್ ಗೇಮ್ಸ್ ಗೆ ರೆಡಿಯಾಗಬೇಕು ಎಂದರು.
ಇದೊಂದು ನನಗೆ ಸುದೀರ್ಘವಾದ ಪ್ರವಾಸವಾಗಿದೆ. ಇಂಡೋನೇಷ್ಯಾ, ಮಲೇಶ್ಯಾದಲ್ಲಿ ಎರಡು ವಾರ ಹಾಗೂ ಸಿಂಗಾಪುರದಲ್ಲಿ ಒಂದು ವಾರ ಪಂದ್ಯಗಳನ್ನು ಆಡಿದ್ದೆ. ಇದೀಗ ಮನೆಗೆ ಹೋಗಿ ಸ್ವಲ್ಪ ರಿಲ್ಯಾಕ್ಸ್ ಮಾಡ್ಕೊಂಡು ಕಾಮನ್ ವೆಲ್ತ್ ಗೇಮ್ಸ್ ಗೆ ಸನ್ನದ್ದಗೊಳ್ಳಬೇಕಿದೆ. ಹಾಗೇ ಮುಂದೆ ವಿಶ್ವ ಚಾಂಪಿಯನ್ ಷಿಪ್, ಜಪಾನ್ ಓಪನ್ ಟೂರ್ನಿಗಳಲ್ಲೂ ಆಡಬೇಕಿದೆ. ನಾನು ಈಗ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಂಡಿದ್ದೇನೆ. ಕಂಡಿಷನಿಂಗ್ ಕೋಚ್ ಶ್ರೀಕಾಂತ್ ಸರ್ ನನ್ನ ಜೊತೆಗಿದ್ದಾರೆ. ಹೀಗಾಗಿ ಏನು ತೊಂದರೆ ಇಲ್ಲ ಅಂತಾರೆ ಪಿ.ವಿ. ಸಿಂಧು.

ಇನ್ನು ಪಿ.ವಿ ಸಿಂಧು ಅವರು ಮುಂಬರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದಾರೆ. ಯಾಕಂದ್ರೆ ಈ ಹಿಂದಿನ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಅಲ್ಲದೆ ತಂಡವಾಗಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆಲ್ಲುವುದು ಅಷ್ಟೊಂದು ಸುಲಭವಿಲ್ಲ. ಅತ್ಯುತ್ತಮ ಆಟಗಾರ್ತಿಯರು ಕಣದಲ್ಲಿರುತ್ತಾರೆ. ಆದ್ರೂ ಪದಕ ಗೆದ್ದೇ ಗೆಲ್ಲುತ್ತೇವೆ ಅನ್ನೋ ವಿಶ್ವಾಸವಿದೆ. ಅದಕ್ಕಿಂತ ಹೆಚ್ಚಾಗಿ ಇದು ಟೀಮ್ ಗೇಮ್. ಎಲ್ಲರೂ ಕೂಡ ಹಂಡ್ರೆಡ್ ಪರ್ಸೆಂಟ್ ಪ್ರಯತ್ನ ಮಾಡಲೇಬೇಕು. ನನಗೆ ನಂಬಿಕೆ ಇದೆ. ನಾನು ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ ಎಂದು ಪಿ.ವಿ. ಸಿಂಧುವಿಶ್ವಾಸದಿಂದಲೇ ಹೇಳಿದ್ದಾರೆ.