ಶುಕ್ರವಾರ ನಡೆದ ಐಪಿಎಲ್ 2022ರಲ್ಲಿ ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 54 ರನ್‌ಗಳ ಭರ್ಜರಿ ಜಯ ದಾಖಲಿಸಿ, ಪ್ಲೇ ಆಫ್ ರೇಸ್‌ನಲ್ಲಿ ಉಳಿದು ಕೊಂಡಿದೆ. PBKS 12 ಪಂದ್ಯಗಳಿಂದ 12 ಅಂಕಗಳನ್ನು ಹೊಂದಿದೆ. RCB 13 ಪಂದ್ಯಗಳಿಂದ 14 ಅಂಕಗಳನ್ನು ಕಲೆ ಹಾಕಿದ್ದು, ಮುಂದಿನ ಹಂತದ ಕನಸು ಕಾಣುತ್ತಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಲಿಯಾಮ್ ಲಿವಿಂಗ್‌ಸ್ಟನ್ 42 ಎಸೆತಗಳಲ್ಲಿ 70 ರನ್ ಮತ್ತು ಜಾನಿ ಬೈರ್‌ಸ್ಟೋ 29 ಎಸೆತಗಳಲ್ಲಿ 66 ರನ್ ಗಳಿಸಿದರು. ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಪಡೆದರು. ಇದಕ್ಕೆ ಉತ್ತರವಾಗಿ ನಿಗದಿತ ಓವರ್‌ಗಳಲ್ಲಿ ಆರ್‌ಸಿಬಿ 9 ವಿಕೆಟ್‌ಗೆ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಗ್ಲೆನ್ ಮ್ಯಾಕ್ಸ್‌ವೆಲ್ 35 ರನ್ ಗಳಿಸಿದರು. ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಲು ಸಾಧ್ಯವಾಗಲಿಲ್ಲ. ಇವರು 20 ರನ್ ಗಳಿಸಿ ಔಟಾದರು. ಪಂಜಾಬ್ ಪರ ಕಗಿಸೊ ರಬಾಡ ಗರಿಷ್ಠ ಮೂರು ವಿಕೆಟ್ ಪಡೆದರು.

ಪಂಜಾಬ್ ಪರ ಆರಂಭಿಕರಾದ ಶಿಖರ್ ಧವನ್ ಮತ್ತು ಜಾನಿ ಬೈರ್‌ಸ್ಟೋ ಪಂಜಾಬ್‌ಗೆ ಬಿರುಸಿನ ಆರಂಭ ನೀಡಿದರು. ಇಬ್ಬರೂ 20 ಎಸೆತಗಳಲ್ಲಿ 60 ರನ್‌ಗಳ ಜೊತೆಯಾಟವಾಡಿದರು. ಧವನ್ 15 ಎಸೆತಗಳಲ್ಲಿ 21 ರನ್ ಗಳಿಸಿ ಗ್ಲೆನ್ ಮ್ಯಾಕ್ಸ್ ವೆಲ್ ಗೆ ವಿಕೆಟ್ ಒಪ್ಪಿಸಿದರು. ಭಾನುಕಾ ರಾಜಪಕ್ಸೆ ಅವರನ್ನು ಅವರದೇ ದೇಶದ ಶ್ರೀಲಂಕಾದ ವನಿಂದು ಹಸರಂಗ ಪೆವಿಲಿಯನ್ ಗೆ ಕಳುಹಿಸಿದರು. ಪಂಜಾಬ್ ನ ಮೂರನೇ ವಿಕೆಟ್ ರೂಪದಲ್ಲಿ ಬೇರ್ ಸ್ಟೋ ಔಟ್ ಆದರು. ಜಾನಿ ಬೈರ್‌ಸ್ಟೋ 29 ಎಸೆತಗಳಲ್ಲಿ 66 ರನ್ ಗಳಿಸಿ ಶಹಬಾಜ್ ಅಹ್ಮದ್ ಎಸೆತದಲ್ಲಿ ಮೊಹಮ್ಮದ್ ಸಿರಾಜ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ನಾಯಕ ಮಯಾಂಕ್ ಅಗರ್ವಾಲ್ 16 ಎಸೆತಗಳಲ್ಲಿ 19 ರನ್ ಗಳಿಸಿದರು. ಅವರ ವಿಕೆಟ್ ಅನ್ನು ಹರ್ಷಲ್ ಪಟೇಲ್ ಪಡೆದರು. ಉಳಿದ ಬ್ಯಾಟ್ಸ್‌ಮನ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಕಬಳಿಸಿದರು.

ರಬಾಡ ನಾಲ್ಕನೇ ಬಾರಿ ವಿರಾಟ್ ವಿಕೆಟ್ ಪಡೆದರು. ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಹೆಚ್ಚು ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಇವರು 8 ಎಸೆತಗಳಲ್ಲಿ 10 ರನ್ ಗಳಿಸುವ ಮೂಲಕ ರಿಷಿ ಧವನ್‌ಗೆ ಬಲಿಯಾದರು. ಇಬ್ಬರನ್ನೂ ಫೀಲ್ಡ್ ಅಂಪೈರ್ ನಾಟೌಟ್ ನೀಡಿದ್ದರು. ಚೆಂಡು ಬ್ಯಾಟ್‌ಗೆ ತಗುಲಿರುವುದು ಡಿಆರ್‌ಎಸ್‌ನಲ್ಲಿ ಸ್ಪಷ್ಟವಾಯಿತು. ಮಹಿಪಾಲ್ ಲೊಮ್ರೋರ್ ಅವರನ್ನೂ ರಿಷಿ ಧವನ್ ಔಟ್ ಮಾಡಿದರು. ರಜತ್ ಪಾಟಿದಾರ್ 26 ರನ್ ಗಳಿಸಿ ರಾಹುಲ್ ಚಹಾರ್ ಗೆ ವಿಕೆಟ್ ನೀಡಿದರು. ಹರ್‌ಪ್ರೀತ್ ಬ್ರಾರ್ ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಪಡೆದರು. ದಿನೇಶ್ ಕಾರ್ತಿಕ್ 11 ರನ್ ಗಳಿಸಿ ಅರ್ಷದೀಪ್ ಸಿಂಗ್ ಬಲಿಯಾದರು. ನಂತರದ ಬ್ಯಾಟ್ಸ್‌ಮನ್‌ಗಳೂ ವಿಫಲರಾದರು.