ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಕೊನೆಯ ಹಂತಕ್ಕೆ ಹತ್ತಿರವಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಲೀಗ್ ನಲ್ಲಿ ಈಗ ದಿನಕ್ಕೆ ಒಂದೊಂದೆ ಪಂದ್ಯಗಳು ನಡೆಯುತ್ತಿವೆ. ಗುರುವಾರ ನಡೆಯಲಿರುವ ಪಂದ್ಯದಲ್ಲಿ ಪುಣೇರಿ ಪಲ್ಟನ್ ಹಾಗೂ ಯು.ಪಿ ಯೋಧಾ ತಂಡಗಳು ಸೆಣಸಾಟ ನಡೆಸಲಿವೆ.
ಪುಣೆರಿ ಸದ್ಯ ಆಡಿದ 13 ಪಂದ್ಯಗಳಲ್ಲಿ 6 ಜಯ, 7 ಸೋಲು ಕಂಡಿದ್ದು 32 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ. ಲೀಗ್ ಹಂತದ ಕೊನೆಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಪುಣೇರಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ. ಹಿಂದಿನ ಪಂದ್ಯದಲ್ಲಿ ಪಲ್ಟನ್ ಬಲಿಷ್ಠ ದಬಾಂಗ್ ತಂಡವನ್ನು ಮಣಿಸಿ ಅಬ್ಬರಿಸಿತ್ತು. ಇತ್ತ ಯು.ಪಿ ಯೋಧಾ ಸಹ 13 ಪಂದ್ಯಗಳಲ್ಲಿ 5 ಜಯ, 5 ಸೋಲು, 3 ಡ್ರಾ ಸಾಧಿಸಿದ್ದು 36 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಯೋಧಾ 35-36ರಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಸೋಲು ಕಂಡಿತ್ತು.
ಒಟ್ಟಾರೆ ಅಂಕಗಳಿಕೆಯ ಲೆಕ್ಕಾಚಾರದಲ್ಲಿ ಯು.ಪಿ ಐದನೇ ಸ್ಥಾನದಲ್ಲಿದೆ. ಯೋಧಾ 220 ಅಂಕಗಳನ್ನು ಕಲೆ ಹಾಕಿದ್ದರೆ, ಪುಣೇರಿ 194 ಅಂಕವನ್ನು ಕಲೆ ಹಾಕಿದೆ. ರಕ್ಷಣಾ ಆಟದ ವಿಚಾರದಲ್ಲಿ ಉಭಯ ತಂಡಗಳು ಸಮಬಲದ ಪ್ರದರ್ಸನ ನೀಡಿವೆ. ಯು.ಪಿ ಒಟ್ಟು ಟ್ಯಾಕಲ್ ನಲ್ಲಿ 139 ಅಂಕ, ಪುಣೇರಿ 135 ಅಂಕ ತನ್ನದಾಗಿಸಿಕೊಂಡಿದೆ.
ಯು.ಪಿ ಪರ ಸುರೇಂದ್ರ ಗಿಲ್ ಹಾಗೂ ಪ್ರದೀಪ್ ನರ್ವಾಲ್ ಜೋಡಿ ಅಬ್ಬರದ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದೆ. ಈ ಜೋಡಿ ರೈಡಿಂಗ್ ನಲ್ಲಿ ತಲಾ 77 ಅಂಕಗಳನ್ನು ಕಲೆ ಹಾಕಿದೆ. ಇವರಿಗೆ ಶ್ರೀಕಾಂತ್ ಜಾದವ್ ಉತ್ತಮ ಸಾಥ್ ನೀಡಬೇಕಿದೆ. ಇನ್ನು ಪುಣೇರಿ ಪರ ಅಸ್ಲಂ ಇನಾಂದಾರ್ ದಾಳಿಯಲ್ಲಿ ಮಿಂಚಬಲ್ಲರು. ಇವರು 73 ಅಂಕ ಸೇರಿಸಿದ್ದರೆ, ಮೋಹಿತ್ ಗೊಯಟ್ 56 ಅಂಕ ಸೆರಿಸಿ ಮಿಂಚಿದ್ದಾರೆ.
ಡಿಫೇಂಡರ್ ಗಳ ಪಟ್ಟಿಯಲ್ಲಿ ಯೋಧಾ ತಂಡದ ನಿತೀಶ್ ಕುಮಾರ್ ಹಾಗೂ ಸುಮಿತ್ ಆರ್ಭಟ ನಡೆಸಬಲ್ಲರು. ಇನ್ನು ಪುಣೇರಿ ಪರ ರಕ್ಷಣಾ ಆಟಗಾರರು ಸಂಘಟಿತ ಆಟದ ಪ್ರದರ್ಶನ ನೀಡಿ ಜಯದಲ್ಲಿ ಮಿಂಚಬೇಕಿದೆ.