ಮೊದಲಾವಧಿಯಿಂದಲೂ ಭರ್ಜರಿ ಪ್ರದರ್ಶನ ನೀಡಿರುವ ಪುಣೇರಿ ಪಲ್ಟನ್ ತಂಡ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ 79ನೇ ಪಂದ್ಯದಲ್ಲಿ ಯು.ಪಿ ಯೋಧಾ ತಂಡವನ್ನು ಮಣಿಸಿತು.
ಗುರುವಾರ ನಡೆದ ಪಂದ್ಯದಲ್ಲಿ ಪುಣೇರಿ 44-38ರಿಂದ ಯು.ಪಿ ತಂಢವನ್ನು ಸೋಲಿಸಿತು. ಈ ಗೆಲುವಿನ ಮೂಲಕ ಪುಣೇರಿ 14 ಪಂದ್ಯಗಳಲ್ಲಿ 7 ಜಯ, 7 ಸೋಲು ಕಂಡಿದ್ದು 37 ಅಂಕಗಳನ್ನು ಕಲೆ ಹಾಕಿದ್ದು ಎಂಟು ಅಂಕ ಕಲೆ ಹಾಕಿದೆ. ಯೋಧಾ ಈ ಸೋಲಿನ ಮೂಲಕ 14 ಪಂದ್ಯಗಳಲ್ಲಿ 40 ಅಂಕ ಕಲೆ ಹಾಕಿದ್ದು ಏಳನೇ ಸ್ಥಾನದಲ್ಲಿದೆ.
ಈ ಪಂದ್ಯದ ಮೊದಲ 20 ನಿಮಿಷದಲ್ಲಿ ಪುಣೇರಿ 21-18 ಅಂಕಗಳಿಂದ ಮುನ್ನಡೆ ಸಾಧಿಸಿದೆ. ಅಲ್ಲದೆ ಎರಡನೇ ಅವಧಿಯಲ್ಲೂ ಸೊಗಸಾದ ಪ್ರದರ್ಶನ ನೀಡಿದ ಪಲ್ಟನ್ ಅಂಕ ಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ಎರಡನೇ ಅವಧಿಯಲ್ಲಿ ಪುಣೇರಿ 23-20 ರಿಂದ ಮುನ್ನಡೆ ಸಾಧಿಸಿ ಪಂದ್ಯ ಗೆದ್ದಿತು. ಉಭಯ ತಂಡಗಳು ಒಟ್ಟಾರೆ ಪಂದ್ಯದಲ್ಲಿ ತಲಾ ಎರಡು ಬಾರಿ ಆಲೌಟ್ ಆದವು.
ಪುಣೇರಿ ದಾಳಿಯಲ್ಲಿ 40 ಬಾರಿ ಎದುರಾಳಿ ಕೋರ್ಟ್ ಗೆ ಎಂಟ್ರಿ ನೀಡಿ 18 ಆಟಗಾರರನ್ನು ಔಟ್ ಮಾಡಿದರು. ಇಷ್ಟೇ ಪ್ರಯತ್ನದಲ್ಲಿ ಯೋಧಾ ತಂಡ 17 ಅಂಕ ಸೇರಿಸಿತು. ಇನ್ನು ಪುಣೇರಿ ರಕ್ಷಣಾ ವಿಭಾಗದಲ್ಲಿ ಮನಮೋಹಕ ಆಟದ ಪ್ರದರ್ಶನ ನೀಡಿತು. 39 ಬಾರಿ ಯು.ಪಿ ರೈಡರ್ ನ್ನು ಕಟ್ಟಿ ಹಾಕುವ ಪ್ರಯತ್ನದಲ್ಲಿ 14 ಬಾರಿ ಯಶ ಕಂಡಿತು.
ಸ್ಟಾರ್ ಆಟಗಾರ ಮೋಹಿತ್ ಗೋಯತ್ ಒಟ್ಟು 16 ಆರಿ ದಾಳಿ ನಡೆಸಿ 14 ಅಂಕವನ್ನು ಬಾಚಿಕೊಂಡರು. ಇನ್ನೋರ್ವ ಆಟಗಾರ ಅಸ್ಲಂ ಇನಾಂದಾರ್ 12 ಅಂಕ ಸೇರಿಸಿ ಅಬ್ಬರಿಸಿದರು. ಪರಾಜಿತ್ ತಂಡದ ಪರ ಸುರೇಂದ್ರ ಗಿಲ್ 16 ಅಂಕ ಬಾಚಿಕೊಂಡರು.