ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ತೆಲುಗು ಟೈಟಾನ್ಸ್ ತಂಡ ಎಂಟನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ನ 77ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಎದುರಿಸಲಿದೆ.
ಮಂಗಳವಾರ ನಡೆಯಲಿರುವ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಸ್ಟೀಲರ್ಸ್ ಆಡಿದ 13 ಪಂದ್ಯಗಳಲ್ಲಿ 6 ಜಯ, 5 ಸೋಲು, 2 ಡ್ರಾ ಕಂಡಿದ್ದು 39 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಇನ್ನು ತೆಲುಗು ಇಷ್ಟೇ ಪಂದ್ಯಗಳಲ್ಲಿ ಕೇವಲ 1 ಜಯ ಸಾಧಿಸಿದೆ.
ಒಟ್ಟಾರೆ ಟೂರ್ನಿಯಲ್ಲಿ ಅಂಕಗಳಿಸಿದ ಲೆಕ್ಕಾಚಾರದಲ್ಲಿ ಎರಡೂ ತಂಡಗಳು ಸಮನಾಗಿ ಕಾಣುತ್ತವೆ. ಹರಿಯಾಣ 443 ಹಾಗೂ ಟೈಟಾನ್ಸ್ 430 ಅಂಕ ಸೇರಿಸಿದೆ. ಸ್ಟೀಲರ್ಸ್ ಟ್ಯಾಕಲ್ ನಲ್ಲಿ ಬಲಾಢ್ಯವಾಗಿದೆ. ಅಲ್ಲದೆ 140 ಅಂಕ ಸೇರಿಸಿದೆ. ಈ ಲೆಕ್ಕಾಚಾರದಲ್ಲಿ ಟೈಟಾನ್ಸ್ ಹಿಂದಿದೆ.
ಸ್ಟೀಲರ್ಸ್ ತಂಡದ ವಿಕಾಸ್ ಕಂಡೋಲಾ ಪ್ರಸಕ್ತ ಟೂರ್ನಿಯಲ್ಲಿ 100ಕ್ಕೂ ಹೆಚ್ಚು ಅಂಕಗಳನ್ನು ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಒಟ್ಟು 108 ಕಲೆ ಹಾಕಿದ್ದು, ಇದರಲ್ಲಿ 89 ಅಂಕಗಳನ್ನು ದಾಳಿಯಲ್ಲಿ ಕಲೆ ಹಾಕಿದ್ದಾರೆ.
ಟೈಟಾನ್ಸ್ ತಂಡಕ್ಕೆ ರಜನೀಶ್ ಹಾಗೂ ಅಂಕಿತ್ ಬೆನಿವಾಲ್ ಅಂಕಗಳಿಕೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಕ್ರಮವಾಗಿ 71, 66 ಅಂಕ ಸೇರಿಸಿ ಮಿಂಚಿದ್ದಾರೆ.
ಟ್ಯಾಕಲ್ ನಲ್ಲಿ ಸ್ಟೀಲರ್ಸ್ ಆರ್ಭಟ ನಡೆಸಿದೆ. ತಂಡದ ಪರ ಜೈದೀಪ್ 45, ಸುರೇಂದ್ರ ನಾಡಾ 36 ಅಂಕವನ್ನು ಸೇರಿಸಿದ್ದಾರೆ. ಇವರಿಗೆ ಮೋಹಿತ್ ಸಾಥ್ ನೀಡಬೇಕಿದೆ. ಟೈಟಾನ್ಸ್ ತಂಡ ಸಂಘಟಿತ ರಕ್ಷಣಾ ಆಟದ ಪ್ರದರ್ಶನ ನೀಡಿದರೆ ಗೆಲುವು ಲಭಿಸುತ್ತದೆ.