ಬಿಸಿಸಿಐ ಮತ್ತು ಕೊಹ್ಲಿ ಜಟಾಪಟಿ.. ವಿರಾಟ್ ಗೆ ಟಾಂಗ್ ಕೊಟ್ಟ ಪ್ರಗ್ಯಾನ್ ಓಜಾ..
ಬಿಸಿಸಿಐ ವಿರುದ್ಧ ಸಮರ ಸಾರುತ್ತಿರುವ ಟೀಮ್ ಇಂಡಿಯಾದ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಪ್ರಗ್ಯಾನ್ ಓಜಾ ಅವರು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಐಪಿಎಲ್ ನ ಗವರ್ನಿಂಗ್ ಕೌನ್ಸಿಲ್ ನ ಸದಸ್ಯ ಪ್ರಗ್ಯಾನ್ ಓಜಾ ಅವರು ಟ್ವಿಟ್ ಮೂಲಕ ವಿರಾಟ್ ಕೊಹ್ಲಿಯ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.
ಒಬ್ಬ ಉತ್ತಮ ಬಾಣಸಿಗನಿಗೆ ಏನನ್ನು ಪ್ರದರ್ಶಿಸಬೇಕು ಮತ್ತು ಏನನ್ನು ಪ್ರದರ್ಶನ ಮಾಡಬಾರದು ಎಂಬುದು ಗೊತ್ತಿರುತ್ತದೆ. ಅಡುಗೆ ಮನೆ ಮತ್ತು ರೆಸ್ಟೊರೆಂಟ್ ನ ಘನತೆ ಆತನ ಮೇಲೆ ಅವಂಬಿತವಾಗಿರುತ್ತದೆ ಎಂದು ಪ್ರಗ್ಯಾನ್ ಓಜಾ ಅವರು ಟ್ವಿಟ್ ಮಾಡಿದ್ದಾರೆ.
ಬಿಸಿಸಿಐ ಮತ್ತು ವಿರಾಟ್ ಕೊಹ್ಲಿಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ಆದ್ರೆ ಟೀಮ್ ಇಂಡಿಯಾದ ನಾಯಕನಾಗಿ, ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮೆನ್ ಆಗಿರುವ ವಿರಾಟ್ ಕೊಹ್ಲಿ ಬಹಿರಂಗವಾಗಿ ಬಿಸಿಸಿಐ ವಿರುದ್ಧ ಹೇಳಿಕೆ ನೀಡಿರುವುದು ತಪ್ಪು ಎಂಬುದು ಹಲವರ ಅಭಿಮತ. ಅದೇ ರೀತಿ ಬಿಸಿಸಿಐ ಕೂಡ ವಿರಾಟ್ ಕೊಹ್ಲಿಯ ಬಗ್ಗೆ ಹೇಳಿಕೆ ನೀಡಿರುವುದು ಕೂಡ ತಪ್ಪು ಅಲ್ವಾ ? ಅನ್ನೋದು ಕೆಲವರ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ಬಿಸಿಸಿಐ ಮತ್ತು ವಿರಾಟ್ ಕೊಹ್ಲಿಯವರ ನಡುವಿನ ಭಿನ್ನಾಭಿಪ್ರಾಯ ತಂಡದ ಮೇಲೆ ಗಾಢವಾದ ಪರಿಣಾಮ ಬೀರುವುದಂತೂ ಅಷ್ಟೇ ಸತ್ಯ.
ಹಾಗೇ ನೋಡಿದ್ರೆ, ವಿರಾಟ್ ಕೊಹ್ಲಿ ನಾಯಕನಾಗಿ ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆದ್ರೆ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಎಡವಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ತಂಡದ ಆಟಗಾರರ ವಿಶ್ವಾಸವನ್ನು ಗಳಿಸಿಕೊಳ್ಳಲು ವಿಫಲರಾಗಿದ್ದಾರೆ.