ಹುವೆಲ್ವಾ (ಸ್ಪೇನ್): ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಖ್ಯಾತ ಆಟಗಾರ್ತಿ ಪಿ.ವಿ ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಕ್ವಾರ್ಟರ್ ಫೈನಲ್ಸ್ ನಲ್ಲಿ ನಿರಾಸೆ ಅನುಭವಿಸಿದ್ದಾರೆ. ಆದರೆ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಉಪಾಂತ್ಯ ತಲುಪುವಲ್ಲಿ ಸಫಲರಾಗಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಕಾದಾಟದಲ್ಲಿ ಸಿಂಧು 17-21, 13-21 ರಿಂದ ಚೈನಿಸ್ ತೈಪೇಯ ತೈ ಜುಯಿಂಗ್ ವಿರುದ್ಧ 42 ನಿಮಿಷಗಳ ಕಾದಾಟದಲ್ಲಿ ನಿರಾಸೆ ಕಂಡರು. ಒಟ್ಟಾರೆಯಾಗಿ ಸ್ಟಾರ್ ಆಟಗಾರ್ತಿಯರು 20 ಬಾರಿ ಮುಖಾಮುಖಿಯಾಗಿದ್ದು, ತೈ ಜುಯಿಂಗ್ 15ರಲ್ಲಿ ಜಯ ಸಾಧಿಸಿದ್ದಾರೆ.
ಮೊದಲ ಗೇಮ್ ನ ಆರಂಭದಲ್ಲಿ ಸಿಂಧು ಕೊಂಚ ಹೋರಾಟ ನೀಡಿದರೂ, ಎರಡನೇ ಹಾಗೂ ನಿರ್ಣಾಯಕ ಸೆಟ್ ನಲ್ಲಿ ಉಭಯ ಆಟಗಾರ್ತಿ ಜಿದ್ದಾಜಿದ್ದಿನ ಪ್ರದರ್ಶನ ನೀಡಿದರು. 7-7 ಮತ್ತು 12-12ರಿಂದ ಸಮಾಂತರವಾಗಿ ಸಾಗುತ್ತಿದ್ದ ಪಂದ್ಯದಲ್ಲಿ ಸಿಂಧು ಕೊನೆಯಲ್ಲಿ ಅಂಕ ಕಲೆ ಹಾಕುವಲ್ಲಿ ವಿಫಲರಾಗಿ ಆಘಾತ ಅನುಭವಿಸಿದರು.
ಇನ್ನು ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ 8-21, 7-21 ರಿಂದ ನೆದರ್ ಲ್ಯಾಂಡ್ ನ ಮಾರ್ಕ್ ಸಿ ವಿರುದ್ಧ ಏಕಪಕ್ಷೀಯ ಕಾದಾಟದಲ್ಲಿ ಜಯ ಸಾಧಿಸಿ, ಮುನ್ನಡೆದರು.