ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರನಾಗಿ ಯಶಸ್ಸು ಕಂಡಿರುವ ವಿಂಡೀಸ್ ತಂಡದ ನಾಯಕ ಕೈರನ್ ಪೊಲಾರ್ಡ್, 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ ಟೆಸ್ಟ್ ಇಂಡೀಸ್‌ನ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚುಟುಕು ಕ್ರಿಕೆಟ್ ಸಮರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕೈರನ್ ಪೊಲಾರ್ಡ್, ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಶುಕ್ರವಾರ ಭಾರತದ ವಿರುದ್ಧ ನಡೆದ 2ನೇ ಟಿ20 ಪಂದ್ಯವನ್ನಾಡುವ ಮೂಲಕ ಈ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಅಲ್ಲದೇ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ ವಿಶ್ವದ 9ನೇ ಆಟಗಾರ ಎಂಬ ಹಿರಿಮೆಗೂ ಪೊಲಾರ್ಡ್ ಪಾತ್ರರಾಗಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿರುವ ಶ್ರೇಷ್ಠ ಆಲ್ರೌಂಡರ್ ಕೈರನ್ ಪೊಲಾರ್ಡ್, ಈವರೆಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1561 ರನ್‌ಗಳಿಸುವ ಜೊತೆಗೆ 42 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇನ್ನೂ ಕೆರೆಬಿಯನ್ ಕ್ರಿಕೆಟ್‌ನ ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೋ 91 T20I ಪಂದ್ಯಗಳನ್ನು ಆಡುವ ಮೂಲಕ 2ನೇ ಸ್ಥಾನದಲ್ಲಿದ್ದರೆ. ವೆಸ್ಟ್ ಇಂಡೀಸ್ ಕ್ರಿಕೆಟ್‌ನ ದೈತ್ಯ ಪ್ರತಿಭೆ ಹಾಗೂ ಚುಟುಕು ಕ್ರಿಕೆಟ್‌ನ ಸ್ಪೋಟಕ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ 79 ಪಂದ್ಯವನ್ನಾಡಿದ್ದಾರೆ. ಇನ್ನೂ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದವರ ಪೈಕಿ 124 ಪಂದ್ಯವನ್ನಾಡಿರುವ ಪಾಕಿಸ್ತಾನದ ಶೊಯೆಬ್ ಮಲ್ಲಿಕ್ ಮೊದಲ ಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ 3 ಪಂದ್ಯಗಳ ಹಿನ್ನಡೆಯೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.
100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ ವಿಂಡೀಸ್ ನಾಯಕ ಕೈರನ್ ಪೊಲಾರ್ಡ್‌ಗೆ ತಂಡದ ಆಟಗಾರರು ಅಭಿನಂದನೆ ಸಲ್ಲಿಸಿದರು. ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ 2ನೇ ಟಿ20 ಪಂದ್ಯ ಆರಂಭಕ್ಕೂ ಮುನ್ನ ನಡೆದ ಟೀಂ ಹಡಲ್‌ನಲ್ಲಿ ವಿಂಡೀಸ್ ತಂಡದ ಹಿರಿಯ ಆಟಗಾರ ಜೇಸನ್ ಹೋಲ್ಡರ್, 100ನೇ T20I ಪಂದ್ಯದ ಕ್ಯಾಪ್ ನೀಡಿದರೆ, ನಿಕೋಲಸ್ ಪೂರನ್ ಜರ್ಸಿ ನೀಡಿ ಗೌರವಿಸಿದರು. ವೆಸ್ಟ್ ಇಂಡೀಸ್ ತಂಡದ ನಾಯಕ ಕೈರನ್ ಪೊಲಾರ್ಡ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ಸೋಶಿಯಲ್ ಮೀಡಿಯಾದಲ್ಲಿ ಶುಭಕೋರಿದೆ.