ಶುಕ್ರವಾರ ನಡೆದ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ 127ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 43-36 ರಿಂದ ಪುಣೇರಿ ಪಲ್ಟನ್ ತಂಡವನ್ನು ಮಣಿಸಿ ಅಬ್ಬರಿಸಿದೆ.
ಬೆಂಗಾಲ್ ತಂಡದ ಸ್ಟಾರ್ ರೈಡರ್ ಮಣಿಂದರ್ ಸಿಂಗ್ ಅಬ್ಬರಿಸಿದರು. 17 ಬಾರಿ ದಾಳಿ ನಡೆಸಿದ ಇವರು 7 ಟಚ್, 4 ಬೋನಸ್ ಪಾಯಿಂಟ್ ಜೇಬಿಗೆ ಹಾಕಿಕೊಂಡರು. ಕನಾರ್ಟಕದ ಸ್ಟಾರ್ ಆಟಗಾರ ಸುಖೇಶ್ ಹೆಗಡೆ 10 ಬಾರಿ ಎದುರಾಳಿ ಕೋರ್ಟ್ ಗೆ ಎಂಟ್ರಿ ನೀಡಿ 7 ಅಂಕ ತಮ್ಮದಾಗಿಸಿಕೊಂಡರು. ರಕ್ಷಣಾ ವಿಭಾಗದಲ್ಲಿ ಅಬೋಜರ್ ಮಿಘಾನಿ 4 ಹಾಗೂ ಅಮಿತ್ ನಿರ್ವಾಲ್ 3 ಅಂಕ ಸೇರಿಸಿ ಜಯದಲ್ಲಿ ಮಿಂಚಿದರು. ಪರಾಜಿತ ತಂಡದ ಪರ ಮೋಹಿತ್ ಗೋಯಟ್ 15 ಅಂಕ ಪೇರಿಸಿದರು.
ಮೊದಲಾವಧಿಯ ಆಟದಲ್ಲಿ ಪುಣೇರಿ 20-10 ರಿಂದ ಮುನ್ನಡೆ ಸಾಧಿಸಿತು. ಎರಡನೇ ಅವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ವಾರಿಯರ್ಸ್ ಮಿಂಚಿದರು. ಎರಡನೇ ಅವಧಿಯಲ್ಲಿ ಪುಣೇರಿ ಎರಡು ಬಾರಿ ಆಲೌಟ್ ಆಯಿತು. ಇನ್ನು ಮೊದಲಾವಧಿಯಲ್ಲಿ ಬೆಂಗಾಲ್ ಒಂದು ಬಾರಿ ಆಲೌಟ್ ಆಯಿತು.
ಪುಣೇರಿ ಒಟ್ಟು 42 ಬಾರಿ ದಾಳಿ ನಡೆಸಿ 18 ಅಂಕ ಸೇರಿಸಿದರೆ, ಬೆಂಗಾಲ್ 43 ಬಾರಿ ಎಂಟ್ರಿ ನಡೆಸಿ 18 ಅಂಕ ಪೇರಿಸಿದರು. ಟ್ಯಾಕಲ್ ನಲ್ಲಿ ಪುಣೇರಿ 10, ಬೆಂಗಾಲ್ 8 ಅಂಕ ಸೇರಿಸಿದವು.