ಕೋಲ್ಕತ್ತಾ ವಿರುದ್ಧ ರೋಚಕ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್ ಇಂದು ಎರಡನೆ ಪಂದ್ಯದಲ್ಲಿ ಬಲಿಷ್ಠ ರಾಜಸ್ತಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಬರ್ಸಾಪಾರಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಶಿಖರ್ ಧವನ್ ನೇತೃತ್ವದ ಪಂಜಾಬ್ ತಂಡ ಕಳೆದ ಬಾರಿಯ ಹಾಲಿ ಚಾಂಪಿಯನ್ ಎದುರು ಕಠಿಣ ಸವಾಲು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಗೆದ್ದಿರುವ ರಾಜಸ್ಥಾನ ಸೂಕ್ತ ಆಡುವ ಹನ್ನೊಂದರ ಬಳಗದ ಹುಡುಕಾಟದಲ್ಲಿದೆ.
ಮೊನ್ನೆ ಸನ್ರೈಸರ್ಸ್ ವಿರುದ್ಧ 72 ರನ್ಗಳ ಗೆಲುವು ದಾಖಲಿಸಿತ್ತು. ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ತಲಾ ಅರ್ಧ ಶತಕ ಸಿಡಿಸಿದ್ದರು.
ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ರಾಜಸ್ತಾನ ಎಂತಹ ಬೌಲಿಂಗ್ ದಾಳಿಯನ್ನುನ ಎದುರಿಸುವ ತಾಕತ್ತು ಹೊಂದಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ದುರ್ಬಲದಂತೆ ಕಂಡುಬರುತ್ತಿದೆ. ದೇವದತ್ ಪಡಿಕಲ್, ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೇಟ್ಮಯರ್ ಬೇಗನೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಇನ್ನು ಬೌಲಿಂಗ್ ವಿಭಾಗದಲ್ಲಿ ಯಜ್ವಿಂದರ್ ಚಾಹಲ್ (17ಕ್ಕೆ 4), ಟ್ರೆಂಟ್ ಬೌಲ್ಟ್ (21ಕ್ಕೆ2) ಅದ್ಭುತ ಬೌಲಿಂಗ್ ದಾಳಿ ಮಾಡಿದ್ದರು. ಆರ್.ಅಶ್ವಿನ್ ಕೂಡ ಎದುರಾಳಿ ಬ್ಯಾಟರ್ಗಳನ್ನು ಕಟ್ಟಿ ಹಾಕುವ ತಾಕತ್ತು ಹೊಂದಿದ್ದಾರೆ.
ಮೊನ್ನೆ ಪಂಜಾಬ್ ತಂಡ ಕೋಲ್ಕತ್ತಾ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿ ಡಿಎಲ್ಎಸ್ ನಿಯಮದಲ್ಲಿ 7 ರನ್ಗಳಿಂದ ಗೆದ್ದುಕೊಂಡಿತು.
ಅಗ್ರ ಕ್ರಮಾಂಕದಲ್ಲಿ ನಾಯಕ ಶಿಖರ್ ಧವನ್ ಹಾಗೂ ಬೌಲಿಂಗ್ನಲ್ಲಿ ಎಡಗೈ ವೇಗಿ ಆರ್ಷದೀಪ್ ತಂಡದ ತಾರಾ ಆಟಗಾರರಾಗಿದ್ದಾರೆ. ಇಂಗ್ಲೆಂಡ್ ತಂಡದ ಪವರ್ ಹಿಟ್ಟರ್ ಆರ್ಷದೀಪ್ಗಾಗಿ ತಂಡ ಕಾಯುತ್ತಿದೆ. ಕಳೆದ ಡಿಸೆಂಬರ್ನಲ್ಲಿ ಗಾಯಗೊಂಡಿದ್ದ ಲಿಯಾಮ್ ಲಿವೀಂಗ್ಸ್ಟೋನ್ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಿಂದ ಅನುಮತಿ ಪಡೆಯಬೇಕಿದೆ.