ನಾಯಕ ಬಾಬರ್ ಆಜ಼ಂ(114) ಹಾಗೂ ಇಮಾಮ್-ಉಲ್-ಹಕ್(106) ಅವರ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ದಾಖಲೆಯ 349 ರನ್ಗಳ ಕಠಿಣ ಟಾರ್ಗೆಟ್ ಚೇಸ್ ಮಾಡುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ.
ಲಾಹೋರ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 348 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಅಸಾಧಾರಣ ಸವಾಲು ಬೆನ್ನತ್ತಿದ ಅತಿಥೇಯ ಪಾಕಿಸ್ತಾನ, 49 ಓವರ್ಗಳಲ್ಲಿ 4 ವಿಕೆಟ್ಗೆ 349 ರನ್ಗಳಿಸುವ ಮೂಲಕ ಇನ್ನು ಒಂದು ಓವರ್ ಬಾಕಿಯಿರುವಂತೆ 6 ವಿಕೆಟ್ಗಳಿಂದ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿತು.
ಆಸೀಸ್ ನೀಡಿದ ಬೃಹತ್ ಸವಾಲು ಎದುರಿಸಿದ ಪಾಕಿಸ್ತಾನಕ್ಕೆ ಆರಂಭಿಕರಾದ ಫಖರ್ ಜಮಾನ್(67) ಹಾಗೂ ಇಮಾಮ್-ಉಲ್-ಹಕ್(106) ಮೊದಲ ವಿಕೆಟ್ಗೆ 118 ರನ್ಗಳ ಜೊತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿದರು. ಆದರೆ ನಂತರ ಜೊತೆಯಾದ ನಾಯಕ ಬಾಬರ್ ಆಜ಼ಂ(114) ಹಾಗೂ ಇಮಾಮ್-ಉಲ್-ಹಕ್ ಅದ್ಭುತ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಏಕದಿನ ಸರಣಿಯಲ್ಲಿ ಸತತ 2ನೇ ಶತಕ ಬಾರಿಸಿದ ಇಮಾಮ್-ಉಲ್-ಹಕ್, ಪಾಕಿಸ್ತಾನದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.
ಇವರಿಗೆ ಸಾಥ್ ನೀಡಿದ ಬಾಬರ್ ಆಜ಼ಂ ಸಹ ಶತಕ ಸಿಡಿಸಿ ಮಿಂಚಿದರು. ಈ ಜೋಡಿ ಎರಡನೇ ವಿಕೆಟ್ಗೆ 111 ರನ್ಗಳ ಅದ್ಭುತ ಜೊತೆಯಾಟವಾಡಿ ತಂಡ ಗೆಲುವಿನತ್ತ ಮುಖ ಮಾಡುವಂತೆ ಮಾಡಿದರು. ಇವರಿಬ್ಬರ ನಂತರ ಕಣಕ್ಕಿಳಿದ ಮೊಹಮ್ಮದ್ ರಿಜ್ವಾನ್(23), ಖುಷ್ದುಲ್ ಶಾ(27*) ಉಪಯುಕ್ತ ಬ್ಯಾಟಿಂಗ್ ಮೂಲಕ ತಂಡವನ್ನ ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಪಾಕಿಸ್ತಾನ 1-1ರಿಂದ ಸಮಬಲ ಸಾಧಿಸಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾಕ್ಕೆ ಬ್ಯಾಟ್ಸಮನ್ಗಳು ತಮ್ಮ ಅದ್ಭುತ ಆಟದಿಂದ ಆಸರೆಯಾದರು. ಆರಂಭಿಕ ಆಟಗಾರ ಟ್ರಾವಿಸ್ ಹೆಡ್(89) ಹಾಗೂ ಬೆನ್ ಮೆಕ್ಡರ್ಮಾಟ್(104) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬಂದ ಮಾರ್ನಸ್ ಲಬುಸ್ಚೆಗ್ನೆ(59) ಹಾಗೂ ಮಾರ್ಕಸ್ ಸ್ಟಾಯ್ನಿಸ್(49) ಅವರುಗಳ ನೆರವಿನಿಂದ 50 ಓವರ್ಗಳಲ್ಲಿ 8 ವಿಕೆಟ್ಗೆ 348 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.