ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಸಿಂಧು 21-17, 17-21, 17-21ರಿಂದ ಜಪಾನ್ ನ ಅಯಾ ಓಹೋರಿ ವಿರುದ್ಧ ಗಂಟೆ 10 ನಿಮಿಷದ ಕಾದಾಟದಲ್ಲಿ ಜಯ ಸಾಧಿಸಿದರು.
ಮೊದಲ ಗೇಮ್ ನಲ್ಲಿ ಹಿನ್ನಡೆ ಅನುಭವಿಸಿದರೂ, ಎರಡನೇ ಹಾಗೂ ಮೂರನೇ ಗೇಮ್ ನಲ್ಲಿ ಮನಮೋಹಕ ಪ್ರದರ್ಶನ ನೀಡಿದ ಸಿಂಧು ಅರ್ಹ ಗೆಲುವು ದಾಖಲಿಸಿ, ಎರಡನೇ ಸುತ್ತು ಪ್ರವೇಶಿಸಿದರು. ಸಿಂಧು ಎರಡನೇ ಸುತ್ತಿನಲ್ಲಿ ಜರ್ಮನಿಯ ಇವೊನೆ ಲಿ ವಿರುದ್ಧ ಹೋರಾಟ ನಡೆಸಲಿದ್ದಾರೆ.
ಇನ್ನು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಬಿ.ಸಾಯ್ ಪ್ರಣೀತ್ ಅವರು 21-19, 21-18ರಿಂದ ತೋಮಾ ಜೂನಿಯರ್ ಪೊಪೊವ್ ವಿರುದ್ಧ ಎರಡು ನೇರ ಗೇಮ್ ಗಳಲ್ಲಿ ಜಯ ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ 21-15, 19-21, 21-12ರಿಂದ ಎಚ್.ಎಸ್ ಪ್ರಣಯ್ ಅವರನ್ನು ಸೋಲಿಸಿ ಮುನ್ನಡೆದರು.
ಮಿಶ್ರ ಡಬಲ್ಸ್ ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಜೋಡಿ ನಿರಾಸೆ ಅನುಭವಿಸಿದೆ.