ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ, ವೆಸ್ಟ್ ಇಂಡೀಸ್ ವಿರುದ್ಧ ಗೆಲುವಿಗೆ ನಾಲ್ಕು ವಿಕೆಟ್ ಅವಶ್ಯಕತೆ ಇದೆ.
ಬುಧವಾರ 9 ವಿಕೆಟ್ ಗೆ 224 ರನ್ ಗಳಿಂದ ಆಟ ಮುಂದುವರಿಸಿದ ಪ್ರವಾಸಿ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 230 ರನ್ ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಲಂಕಾ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ 52 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಪ್ರವಾಸಿ ತಂಡ ಪಂದ್ಯದಲ್ಲಿ ಗೆಲ್ಲಲು ಇನ್ನು 296 ರನ್ ಗಳ ಅವಶ್ಯಕತೆ ಇದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾದ ಆರಂಭಿಕ ಆಟಗಾರ ದಿಮುತ್ ಕರುಣರತ್ನೆ 9 ಬೌಂಡರಿ ಸಹಾಯದಿಂದ 83 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಅನುಭವಿ ಆಂಜಿಲೋ ಮ್ಯಾಥ್ಯೂಸ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 69 ರನ್ ಬಾರಿಸಿ ಮೊತ್ತ ಹಿಗ್ಗಿಸಿದರು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ ತಂಡಕ್ಕೆ ಲಂಕಾ ಸ್ಪಿನ್ನರ್ ರಮೇಶ್ ಮೆಂಡೀಸ್ ಶಾಕ್ ನೀಡಿದರು. ಇವರು 11 ಓವರ್ ಗಳಲ್ಲಿ 17 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ವಿಂಡೀಸ್ ಪರ ಎನ್ಕ್ರುಮಾ ಬೋನರ್ (ಅಜೇಯ 18) ಹಾಗೂ ಜೋಶುವಾ ಡಾ ಸಿಲ್ವಾ (ಅಜೇಯ 15) ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.