ಒಲಿಂಪಿಕ್ ಮತ್ತು ವಿಶ್ವಕಪ್ ಪದಕ ವಿಜೇತ ತಂಡದ ಸದಸ್ಯ ಹಿರಿಯ ಹಾಕಿ ಆಟಗಾರ ವರೀಂದರ್ ಸಿಂಗ್ ಮಂಗಳವಾರ ಬೆಳಗ್ಗೆ ಜಲಂಧರ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಸುದ್ದಿ ಭಾರತೀಯ ಹಾಕಿ ಮತ್ತು ಕ್ರೀಡಾ ಜಗತ್ತಿಗೆ ತುಂಬಾ ದುಃಖ ತಂದಿದೆ. ವರೀಂದರ್ ಅವರಿಗೆ 75 ವರ್ಷ ವಯಸ್ಸಾಗಿತ್ತು. ವರೀಂದರ್ ಅವರು 1970 ರ ದಶಕದಲ್ಲಿ ಭಾರತಕ್ಕೆ ಅನೇಕ ಸ್ಮರಣೀಯ ವಿಜಯಗಳ ಭಾಗವಾಗಿದ್ದಾರೆ.
ವರೀಂದರ್ ಸಿಂಗ್ 1975 ರಲ್ಲಿ ಕೌಲಾಲಂಪುರದಲ್ಲಿ ನಡೆದ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಪ್ರಮುಖ ಭಾಗವಾಗಿದ್ದರು. ವಿಶೇಷವೆಂದರೆ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತಕ್ಕೆ ಇದುವರೆಗೆ ಒಂದೇ ಒಂದು ಚಿನ್ನದ ಪದಕ ಮಾತ್ರ ಲಭಿಸಿದ್ದು, 1975ರ ನಂತರ ಭಾರತ ಈ ಸ್ಪರ್ಧೆಯಲ್ಲಿ ಇನ್ನೂ ಚಿನ್ನ ಗೆದ್ದಿಲ್ಲ. 47 ವರ್ಷಗಳ ಹಿಂದೆ ಭಾರತ ಈ ಸ್ಪರ್ಧೆಯ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 2-1 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದಿತ್ತು.

ವರೀಂದರ್ 1972 ರ ಮ್ಯೂನಿಚ್ ಒಲಿಂಪಿಕ್ಸ್‌ನ ಭಾಗವಾಗಿದ್ದರು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದಿತ್ತು. ಇದರ ನಂತರ, 1973 ರಲ್ಲಿ ಆಮ್ಸ್ಟರ್‌ಡ್ಯಾಮ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ತಂಡದಲ್ಲಿ ವರೀಂದರ್ ಅವರನ್ನು ಇದ್ದರು. 1974 ಮತ್ತು 1978ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ತಂಡದಲ್ಲಿ ವರೀಂದರ್ ಸಿಂಗ್ ಕೂಡ ಇದ್ದರು.
ವರೀಂದರ್ ಸಿಂಗ್ ಅವರಿಗೆ 2007 ರಲ್ಲಿ ಪ್ರತಿಷ್ಠಿತ ಧ್ಯಾನಚಂದ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವರೀಂದರ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಹಾಕಿ ಇಂಡಿಯಾ, “ವರಿಂದರ್ ಸಿಂಗ್ ಅವರ ಸಾಧನೆಗಳು ಹಾಕಿ ಪ್ರಪಂಚದಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತದೆ” ಎಂದು ತನ್ನ ಬಿಡುಗಡೆಯಲ್ಲಿ ತಿಳಿಸಿದೆ.