bcci- ಟೀಮ್ ಇಂಡಿಯಾದ ಭವಿಷ್ಯದ ನಾಯಕ ಯಾರು ?
ಟೀಮ್ ಇಂಡಿಯಾದ ಭವಿಷ್ಯದ ನಾಯಕ ಯಾರು ? ಈ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ಸಿಗುತ್ತಿಲ್ಲ. ಯಾಕಂದ್ರೆ ಸದ್ಯದ ಟೀಮ್ ಇಂಡಿಯಾದಲ್ಲಿ ಹಿರಿಯ ಆಟಗಾರರನ್ನು ಬಿಟ್ಟು ಯುವ ಆಟಗಾರರು ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆದುಕೊಳ್ಳಲು ವಿಫಲರಾಗುತ್ತಿದ್ದಾರೆ.
ಹೌದು, ವಿರಾಟ್ ಕೊಹ್ಲಿ ಉತ್ತರಾಧಿಕಾರಿಯಾಗಿ ರೋಹಿತ್ ಶರ್ಮಾ ಏಕದಿನ ಮತ್ತು ಟಿ-20 ತಂಡಕ್ಕೆ ಆಯ್ಕೆಯಾಗಿದ್ದಾರೆ. ಟೆಸ್ಟ್ ತಂಡವನ್ನು ಕೂಡ ರೋಹಿತ್ ಶರ್ಮಾ ಮುನ್ನಡೆಸುವ ಸಾಧ್ಯತೆ ಇದೆ.
ಆದ್ರೆ ಇದು ಟೀಮ್ ಇಂಡಿಯಾಗೆ ತಾತ್ಕಾಲಿಕ ಪರಿಹಾರ. ಆದ್ರೆ ಭವಿಷ್ಯದ ದೃಷ್ಟಿಯಲ್ಲಿ ಯಾರನ್ನು ತಂಡದ ನಾಯಕನಾಗಿ ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಕಾಡುತ್ತಿದೆ.
ವಿರಾಟ್ ಕೊಹ್ಲಿಗೆ 33 ವರ್ಷ. ಕನಿಷ್ಠ ಅಂದ್ರು ಇನ್ನೂ ಮೂರು ನಾಲ್ಕು ವರ್ಷ ಆಡಬಹುದು. ರೋಹಿತ್ ಶರ್ಮಾಗೆ 34 ವರ್ಷ. ರೋಹಿತ್ ಗೂ ಎರಡು ಮೂರು ವರ್ಷ ಆಡುವ ಸಾಮಥ್ರ್ಯವಿದೆ. ಆದ್ರೆ ಗಾಯದ ಸಮಸ್ಯೆ ಆಗಾಗ ಕಾಡುತ್ತಿದೆ. ಇನ್ನು ಕೆ.ಎಲ್. ರಾಹುಲ್. ವಯಸ್ಸು 28. ಅದ್ಭುತ ಆಟಗಾರನಾಗಿದ್ರೂ ತಂಡವನ್ನು ಮುನ್ನಡೆಸುವ ಸಾಮಥ್ರ್ಯವಿಲ್ಲ ಎಂಬ ಆರೋಪ ಇದೆ. ಹಾಗೇ ಅಜಿಂಕ್ಯಾ ರಹಾನೆ. ಏಕದಿನ ಮತ್ತು ಟಿ-20 ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ರಹಾನೆ, ಟೆಸ್ಟ್ ತಂಡದ ಸ್ಥಾನವೂ ಅಲುಗಾಡುತ್ತಿದೆ. ಹೀಗಾಗಿ ಹಿರಿಯ ಹಾಗೂ ಅನುಭವಿ ಆಟಗಾರರು ಒಂದೆರಡು ವರ್ಷ ಫಾರ್ಮ್ ನಲ್ಲಿದ್ರೆ ತಂಡದಲ್ಲಿರಬಹುದು.
ಇನ್ನೊಂದೆದೆ ಭಾರತ ಕ್ರಿಕೆಟ್ ನಲ್ಲಿ ಯುವ ಆಟಗಾರರು ಭಾರೀ ಸದ್ದು ಮಾಡುತ್ತಿದ್ದಾರೆ. ಆದ್ರೆ ಸ್ಥಿರ ಪ್ರದರ್ಶನ ನೀಡದೇ ಟೀಮ್ ಇಂಡಿಯಾಗೆ ಬಂದು ಹೋಗುತ್ತಿದ್ದಾರೆ. ಪೃಥ್ವಿ ಶಾ ನಾಯಕತ್ವ ಸಾಮಥ್ರ್ಯವಿದ್ರೂ ಸ್ಥಿರ ಪ್ರದರ್ಶನ ನೀಡದೆ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲರಾಗುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಕೂಲ್ ಆಗಿ ಮುನ್ನಡೆಸಿದ್ರೂ ಸರಿಯಾದ ಅವಕಾಶ ಸಿಗುತ್ತಿಲ್ಲ. ಇನ್ನು ರಿಷಬ್ ಪಂತ್. ಅದ್ಭುತ ಆಟಗಾರ. ಮ್ಯಾಚ್ ವಿನ್ನರ್ ಅನ್ನೋ ಹೆಗ್ಗಳಿಕೆ ಇದೆ. ಆದ್ರೆ ಜವಾಬ್ದಾರಿಯನ್ನು ಮರೆತು ಆಡ್ತಾರೆ. ಹೀಗೆ ಟೀಮ್ ಇಂಡಿಯಾದ ನಾಯಕನ ಸ್ಥಾನ ಯಾರಿಗೆ ಒಲಿಯುತ್ತೆ. ಬಿಸಿಸಿಐ ನಾಯಕನ ಪಟ್ಟವನ್ನು ಯಾರಿಗೆ ನೀಡುತ್ತೆ ಅನ್ನೋ ಕುತೂಹಲವಂತೂ ಇದೆ.
ಇನ್ನೊಂದೆಡೆ ಈ ಹಿಂದೆ ಟೀಮ್ ಇಂಡಿಯಾಗೆ ನಾಯಕತ್ವದ ಸಮಸ್ಯೆಯಾಗಿರಲಿಲ್ಲ. 2000ದಿಂದ ನೋಡುವುದಾದ್ರೆ, ಸೌರವ್ ಗಂಗೂಲಿಗೆ ಪರ್ಯಾಯವಾಗಿ ರಾಹುಲ್ ದ್ರಾವಿಡ್ ಇದ್ರು. ನಂತರ ಮಹೇಂದ್ರ ಸಿಂಗ್. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಅಲ್ಲದೆ ಧೋನಿಗೆ ಪರ್ಯಾಯ ನಾಯಕನಾಗಿ ಬೆಳೆದುಬಿಟ್ಟರು. ಅದೇ ರೀತಿ ವಿರಾಟ್ ಕೊಹ್ಲಿಗೆ ಪರ್ಯಾಯ ನಾಯಕನಾಗಿ ಯಾರು ಬೆಳೆದಿಲ್ಲ. ಇದು ವಿಪರ್ಯಾಸವೇ ಸರಿ.
ಒಟ್ಟಿನಲ್ಲಿ ಬಿಸಿಸಿಐ ರೋಹಿತ್ ಶರ್ಮಾಗೆ ಈಗ ತಾತ್ಕಾಲಿಕವಾಗಿ ನಾಯಕತ್ವ ನೀಡಿ ಸಮಸ್ಯೆಯನ್ನು ಬಗೆಹರಿಸಿರಬಹುದು. ಆದ್ರೆ ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರನಿಗೆ ಪಟ್ಟವನ್ನು ನೀಡಬೇಕಾಗುತ್ತದೆ. ಹಾಗೇ ಒಂದು ವೇಳೆ ನೀಡಿದ್ರೆ ಮುಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರು ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್. ಇವರಿಬ್ಬರಿಗೆ ಬಿಸಿಸಿಐ ಮಣೆ ಹಾಕುತ್ತಾ ಅನ್ನೋದನ್ನು ಕಾದು ನೋಡಬೇಕು.