ಹೆನ್ರಿ ನಿಕೋಲ್ಸ್(105) ಅಮೋಘ ಶತಕ ಹಾಗೂ ಟಾಮ್ ಬ್ಲಂಡೆಲ್(96) ಜವಾಬ್ದಾರಿಯುತ ಆಟದ ನೆರವಿನಿಂದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮುನ್ನಡೆ ಪಡೆದಿರುವ ನ್ಯೂಜಿ಼ಲೆಂಡ್ ಗೆಲುವಿನತ್ತ ದಾಪುಗಾಲಿರಿಸಿದೆ.
ಕ್ರೈಸ್ಟ್ ಚರ್ಚ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅತಿಥೇಯ ಸೌತ್ ಆಫ್ರಿಕಾ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ 95 ರನ್ಗಳಿಗೆ ಕಟ್ಟಿಹಾಕಿದ ಕಿವೀಸ್, ಬ್ಯಾಟಿಂಗ್ನಲ್ಲೂ ಮಿಂಚಿತು. ಪರಿಣಾಮ ಮೊದಲ ಇನ್ನಿಂಗ್ಸ್ನಲ್ಲಿ 482 ರನ್ ಕಲೆಹಾಕಿದ ನ್ಯೂಜಿ಼ಲೆಂಡ್, 387 ರನ್ಗಳ ಬೃಹತ್ ಮುನ್ನಡೆ ಸಾಧಿಸಿತು. ಇದಕ್ಕುತ್ತರವಾಗಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಸೌತ್ ಆಫ್ರಿಕಾ, 2ನೇ ದಿನದಂತ್ಯಕ್ಕೆ 34 ರನ್ಗಳಿಗೆ ಆರಂಭಿಕ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ, ಇನ್ನಿಂಗ್ಸ್ ಸೋಲಿನ ಭೀತಿಗೆ ಸಿಲುಕಿದೆ. ಸದ್ಯ 353 ರನ್ಗಳ ಹಿನ್ನಡೆ ಅನುಭವಿಸಿರುವ ಸೌತ್ ಆಫ್ರಿಕಾ ಪರ ವ್ಯಾನ್ ದರ್ ದುಸೇನ್(9*) ಹಾಗೂ ತೆಂಬ ಬವುಮಾ(22*) ಕಣದಲ್ಲಿದ್ದಾರೆ.
ಇದಕ್ಕೂ ಮುನ್ನ ಮೊದಲ ದಿನದ ಮೊತ್ತ 3 ವಿಕೆಟ್ ನಷ್ಟಕ್ಕೆ 116 ರನ್ಗಳಿಂದ 2ನೇ ದಿನದಾಟ ಆರಂಭಿಸಿದ ಕಿವೀಸ್ ಪಡೆಗೆ ಬ್ಯಾಟ್ಸಮನ್ಗಳು ಆಸರೆಯಾದರು. ಮೊದಲ ದಿನದಂತ್ಯಕ್ಕೆ ಕಣದಲ್ಲಿದ್ದ ವ್ಯಾಗ್ನರ್ (49) ರನ್ಗಳಿಸಿ ಔಟಾದರೆ. ಬಳಿಕ ಬಂದ ಡೆರೆಲ್ ಮಿಚೆಲ್(16) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಈ ವೇಳೆ 6ನೇ ವಿಕೆಟ್ಗೆ ಜೊತೆಯಾದ ನಿಕೋಲ್ಸ್ ಹಾಗೂ ಬ್ಲಂಡೆಲ್ ತಂಡಕ್ಕೆ ನೆರವಾದರು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ನಿಕೋಲ್ಸ್, ತಮ್ಮ ಟೆಸ್ಟ್ ಕ್ರಿಕೆಟ್ ಜೀವನದ 8ನೇ ಶತಕಸಿಡಿಸಿ ಮಿಂಚಿದರು. ಆದರೆ ವೈಯಕ್ತಿಕ 105 ರನ್ಗಳಿಸಿ ಆಡುತ್ತಿದ್ದ ನಿಕೋಲ್ಸ್, ಓಲಿವಿಯರ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ನಂತರ ಜೊತೆಯಾದ ಬ್ಲಂಡೆಲ್ ಹಾಗೂ ಗ್ರ್ಯಾಂಡ್ಹೋಮ್ ತಂಡದ ರನ್ ವೇಗವನ್ನು ಹೆಚ್ಚಿಸಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 13 ಓವರ್ಗಳಲ್ಲಿ 76 ರನ್ ಕಲೆಹಾಕಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಬ್ಲಂಡೆಲ್ 96 ರನ್ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರೆ, ಗ್ರ್ಯಾಂಡ್ಹೋಮ್ (45) ಉಪಯುಕ್ತ ರನ್ಗಳಿಸಿದರು. ಆದರೆ ಇನ್ನಿಂಗ್ಸ್ ಕೊನೆಯಲ್ಲಿ ಕಣಕ್ಕಿಳಿದ ಮ್ಯಾಟ್ ಹೆನ್ರಿ(58*) ಆಕರ್ಷಕ ಅರ್ಧಶತಕ ಸಿಡಿಸಿ ಬ್ಯಾಟಿಂಗ್ನಲ್ಲೂ ಮಿಂಚಿದರು. ಅಂತಿಮವಾಗಿ ನ್ಯೂಜಿ಼ಲೆಂಡ್ 117.5 ಓವರ್ನಲ್ಲಿ 482 ರನ್ಗಳಿಗೆ ಆಲೌಟ್ ಆಗಿ ಮೊದಲ ಇನ್ನಿಂಗ್ಸ್ನಲ್ಲಿ ಭಾರೀ ಮುನ್ನಡೆ ಪಡೆಯಿತು. ಆಫ್ರಿಕಾ ಪರ ಓಲಿವಿಯರ್ 3 ವಿಕೆಟ್ ಪಡೆದರೆ. ರಬಾಡ, ಜಾನ್ಸನ್ ಹಾಗೂ ಮಾರ್ಕ್ರಂ ತಲಾ 2 ವಿಕೆಟ್ ಪಡೆದುಕೊಂಡರು.
ಸೌತ್ ಆಫ್ರಿಕಾ ಬ್ಯಾಟಿಂಗ್ ವೈಫಲ್ಯ:
ನ್ಯೂಜಿ಼ಲೆಂಡ್ ತಂಡದ ಮೊದಲ ಇನ್ನಿಂಗ್ಸ್ ಮೊತ್ತ 387 ರನ್ಗಳಿಗೆ ಉತ್ತರವಾಗಿ 2ನೇ ಇನ್ನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಎರ್ವೀ(0) ಹಾಗೂ ನಾಯಕ ಡೀನ್ ಎಲ್ಗರ್(0) ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ನಂತರ ಬಂದ ಐಡೆನ್ ಮಾರ್ಕ್ರಂ(2) ಸಹ ಜವಾಬ್ದಾರಿಯುತ ಆಟವಾಡುವಲ್ಲಿ ವಿಫಲರಾದರು. ಕಿವೀಸ್ ಪರ ಟಿಮ್ ಸೌತಿ 2 ಹಾಗೂ ಮ್ಯಾಟ್ ಹೆನ್ರಿ 1 ವಿಕೆಟ್ ಪಡೆದರು.