ನ್ಯೂಜಿ಼ಲೆಂಡ್(New Zealand) ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ(ODI Cricket) ಮೊದಲ ಪಂದ್ಯದಲ್ಲಿ ಸೋಲಿನ ಆಘಾತ ಅನುಭವಿಸಿರುವ ಟೀಂ ಇಂಡಿಯಾ(Team India) ಕಿವೀಸ್ ನೆಲದಲ್ಲಿ ಸತತ ಸೋಲಿನ ಸುಳಿಯಲ್ಲಿ ಸಿಲುಕಿದೆ.
ನ್ಯೂಜಿ಼ಲೆಂಡ್ ಅಂಗಳದಲ್ಲಿ ಈವರೆಗೂ ಆಡಿರುವ ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳ ಸೋಲನುಭವಿಸಿರುವ ಭಾರತ ಇದರೊಂದಿಗೆ ನ್ಯೂಜಿ಼ಲೆಂಡ್ ನೆಲದಲ್ಲಿ ಕೇನ್ ವಿಲಿಯಮ್ಸನ್ ಪಡೆಯ ವಿರುದ್ಧ ಸತತ 5ನೇ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕಿವೀಸ್ ಪಡೆ, ತವರಿನಲ್ಲಿ ಭಾರತ ಸೇರಿದಂತೆ ಬಾಂಗ್ಲಾದೇಶ, ನೆದರ್ಲೆಂಡ್ಸ್ ಹಾಗೂ ಪಾಕಿಸ್ತಾನ ವಿರುದ್ಧ ಸರಣಿಗಳ ಗೆಲುವಿನೊಂದಿಗೆ ಸತತ 13 ODI ಪಂದ್ಯಗಳನ್ನು ಗೆದ್ದುಬೀಗಿದೆ.
ಭಾರತ ಹಾಗೂ ನ್ಯೂಜಿ಼ಲೆಂಡ್ ತಂಡಗಳು ಏಕದಿನ ಕ್ರಿಕೆಟ್‌ನಲ್ಲಿ ಈವರೆಗೂ 111 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 55 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದರೆ, 50 ಪಂದ್ಯದಲ್ಲಿ ನ್ಯೂಜಿ಼ಲೆಂಡ್ ಗೆಲುವನ್ನ ಸಾಧಿಸಿದೆ. ಉಳಿದಂತೆ 1 ಪಂದ್ಯ ಟೈ ಆಗಿದ್ದು, 5 ಪಂದ್ಯದಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ಇನ್ನೂ ನ್ಯೂಜಿ಼ಲೆಂಡ್ ನೆಲದಲ್ಲಿ ಎರಡು ತಂಡಗಳು ಈವರೆಗೂ ಒಟ್ಟು 43 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಕಿವೀಸ್ ಪ್ರಾಬಲ್ಯ ಸಾಧಿಸಿದೆ. 26 ಪಂದ್ಯಗಳಲ್ಲಿ ನ್ಯೂಜಿ಼ಲೆಂಡ್ ಗೆದ್ದಿದ್ದರೆ, ಭಾರತ ಕೇವಲ 14 ಪಂದ್ಯದಲ್ಲಿ ಮಾತ್ರ ಜಯದ ನಗೆಬೀರಿದೆ. 2 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಾರದಿದ್ದರೆ, 1 ಪಂದ್ಯ ಟೈ ಆಗಿದೆ. ಹೀಗಾಗಿ ನ್ಯೂಜಿ಼ಲೆಂಡ್‌ನಲ್ಲಿ ಸತತ ಐದು ಪಂದ್ಯಗಳನ್ನ ಸೋತಿರುವ ಭಾರತ, 2ನೇ ಏಕದಿನ ಪಂದ್ಯದಲ್ಲಿ ಬಲಿಷ್ಠ ಕಮ್‌ಬ್ಯಾಕ್ ಮಾಡುವ ಮೂಲಕ ಸೋಲಿನ ಸುಳಿಯಿಂದ ಹೊರಬರುವುದೇ? ಎಂಬ ಕುತೂಹಲ ಮೂಡಿದೆ.