ಆಲ್ರೌಂಡರ್ ಶಕೀಬ್-ಅಲ್-ಹಸನ್(Shakib Al Hasan)(70) ಅರ್ಧಶತಕದ ನಡುವೆಯೂ ನ್ಯೂಜಿ಼ಲೆಂಡ್(New Zealand) ವಿರುದ್ಧದ ಪಂದ್ಯದಲ್ಲಿ 48 ರನ್ಗಳ ಸೋಲನುಭವಿಸಿದ ಬಾಂಗ್ಲಾದೇಶ(Bangladesh), ಕಿವೀಸ್ ಅಂಗಳದಲ್ಲಿ ನಡೆಯುತ್ತಿರುವ T20I ತ್ರಿಕೋನ ಸರಣಿಯ(T20I Tri Series) ಫೈನಲ್ ರೇಸ್ನಿಂದ ಹೊರಬಿದ್ದಿದೆ.
ಕ್ರೈಸ್ಟ್ಚರ್ಚ್ನಲ್ಲಿ ನಡೆದ ಸರಣಿಯ 5ನೇ ಮೊದಲು ಬ್ಯಾಟ್ ಮಾಡಿದ ಅತಿಥೇಯ ನ್ಯೂಜಿ಼ಲೆಂಡ್ ಸಂಘಟಿತ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಬ್ಯಾಟ್ಸ್ಮನ್ ಡ್ವೇನ್ ಕಾನ್ವೆ(64) ಹಾಗೂ ಗ್ಲೆನ್ ಫಿಲಿಪ್ಸ್(60) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 209 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಬಾಂಗ್ಲಾ, 20 ಓವರ್ಗಳಲ್ಲಿ 7 ವಿಕೆಟ್ಗೆ 160 ರನ್ಗಳಿಸುವ ಮೂಲಕ 48 ರನ್ಗಳ ಸೋಲೊಪ್ಪಿಕೊಂಡಿತು. ಬಾಂಗ್ಲಾದೇಶದ ಪರ ನಾಯಕ ಶಕೀಬ್ ಅಲ್ ಹಸನ್(70) ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರು. ಈ ಗೆಲವಿನೊಂದಿಗೆ ನ್ಯೂಜಿ಼ಲೆಂಡ್, ಟಿ20 ಸರಣಿಯ ಫೈನಲ್ಗೆ ಎಂಟ್ರಿಕೊಟ್ಟಿದೆ.
ಮಿಂಚಿದ ಕಾನ್ವೆ-ಫಿಲಿಪ್ಸ್:
ಮೊದಲು ಬ್ಯಾಟಿಂಗ್ ಆರಂಭಿಸಿದ ಕಿವೀಸ್ ತಂಡಕ್ಕೆ ಫಿನ್ ಅಲೆನ್(32) ಹಾಗೂ ಡ್ವೇನ್ ಕಾನ್ವೆ(64) ಮೊದಲ ವಿಕೆಟ್ಗೆ 45 ರನ್ಗಳ ಉತ್ತಮ ಆರಂಭ ನೀಡಿದರು. ನಂತರ ಬಂದ ಮಾರ್ಟಿನ್ ಗಪ್ಟಿಲ್(34) ಉಪಯುಕ್ತ ರನ್ ಕಲೆಹಾಕಿದರು. ಆದರೆ ನಂತರ ಜೊತೆಯಾದ ಕಾನ್ವೆ ಹಾಗೂ ಗ್ಲೆನ್ ಫಿಲಿಪ್ಸ್, ಎದುರಾಳಿ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದರು. ಬಿರುಸಿನ ಆಟವಾಡಿದ ಕಾನ್ವೆ, 40 ಬಾಲ್ಗಳಲ್ಲಿ 5 ಬೌಂಡರಿ, 3 ಸಿಕ್ಸರ್ ನೆರವಿನಿಂದ 64 ರನ್ಗಳಿಸಿದರೆ. ಗ್ಲೆನ್ ಫಿಲಿಪ್ಸ್ ಕೇವಲ 24 ಬಾಲ್ಗಳಲ್ಲಿ 2 ಬೌಂಡರಿ, 5 ಸಿಕ್ಸರ್ ನೆರವಿನಿಂದ 60 ರನ್ಗಳಿಸಿ ಅಬ್ಬರಿಸಿದರು. ನಂತರ ಬಂದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಬಾಂಗ್ಲಾ ಪರ ಸೈಫುದ್ದಿನ್ ಹಾಗೂ ಹೊಸೈನ್ ತಲಾ 2 ವಿಕೆಟ್ ಪಡೆದರು.
ಶಕೀಬ್ ವ್ಯರ್ಥ ಹೋರಾಟ:
ನ್ಯೂಜಿ಼ಲೆಂಡ್ ನೀಡಿದ 209 ರನ್ಗಳ ಕಠಿಣ ಸವಾಲು ಎದುರಿಸಿದ ಬಾಂಗ್ಲಾದೇಶ, ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಬಾಂಗ್ಲಾ ಪರ ನಾಯಕ ಶಕೀಬ್-ಅಲ್-ಹಸನ್, 44 ಬಾಲ್ಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 70 ರನ್ಗಳಿಸಿ ತಂಡದ ಗೆಲುವಿಗಾಗಿ ಏಕಾಂಗಿಯಾಗಿ ಹೋರಾಡಿದರು. ಆದರೆ ನಾಯಕನಿಗೆ ಇತರೆ ಯಾವುದೇ ಆಟಗಾರರು ಕೈಜೋಡಿಸದ ಪರಿಣಾಮ, ಬಾಂಗ್ಲಾದೇಶ ಕೇವಲ 160 ರನ್ಗಳಿಗೆ ತನ್ನ ಹೋರಾಟ ನಿಲ್ಲಿಸಿತು. ಕಿವೀಸ್ ಪರ ಮಿಲ್ನೆ 3 ವಿಕೆಟ್ ಪಡೆದರೆ, ಸೌಥಿ ಹಾಗೂ ಬ್ರೇಸ್ವೆಲ್ ತಲಾ 2 ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ನ್ಯೂಜಿ಼ಲೆಂಡ್ ಸರಣಿಯಲ್ಲಿ ಆಡಿರುವ 4 ಪಂದ್ಯದಲ್ಲಿ 3 ಗೆಲುವು ಕಂಡಿದ್ದು, 6 ಪಾಯಿಂಟ್ಸ್ಗಳೊಂದಿಗೆ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದರೆ. ಸರಣಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ ಸೋಲಿನ ಆಘಾತ ಅನುಭವಿಸಿರುವ ಬಾಂಗ್ಲಾದೇಶ ಸರಣಿಯಿಂದ ಬಹುತೇಕ ಹೊರಬಿದ್ದಿದೆ.