ಟಿ20 ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಎಲ್ಲಾ ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಬ್ಯುಸಿಯಾಗಿವೆ. ಟೀಂ ಇಂಡಿಯಾ ಆಟಗಾರರು ವಿಶ್ವಕಪ್ ಮುಗಿಸಿ, ನೇರವಾಗಿ ನ್ಯೂಜಿಲೆಂಡ್ಗೆ ತಲುಪಿದೆ. ಒಟ್ಟು ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ ತಂಡ ಆಡಲಿದೆ. ಈ ಸರಣಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಇಂದು ತನ್ನ ತಂಡವನ್ನು ಪ್ರಕಟಿಸಿದೆ.
ನಿರೀಕ್ಷೆಯಂತೆ ಕೇನ್ ವಿಲಿಯಮ್ಸನ್ ಟಿ20 ಮತ್ತು ಏಕದಿನ ಸರಣಿಗಳಲ್ಲಿ ನ್ಯೂಜಿಲೆಂಡ್ ತಂದವನ್ನು ಮುನ್ನಡೆಸಲಿದ್ದಾರೆ. ಆದರೆ, ಸ್ಟಾರ್ ಆಟಗಾರರಾದ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಹಾಗೂ ಓಪನರ್ ಮಾರ್ಟಿನ್ ಗಪ್ಟಿಲ್ ಅವರನ್ನು ಎರಡು ಸರಣಿಗಳಿಗೂ ಆಯ್ಕೆಯಾಗಿಲ್ಲ. ಕಳಪೆ ಪ್ರದರ್ಶನದಿಂದಾಗಿ ಅನುಭವಿ ಬ್ಯಾಟರ್ ಗಪ್ಟಿಲ್ ಅವರನ್ನು ತಂಡದಿಂದಹೊರಗಿಡಲಾಗಿದೆ . ಟಿ20 ವಿಶ್ವಕಪ್ನಲ್ಲೂ ಸಹ ಅವರು ಬೆಂಚ್ಗೆ ಸೀಮಿತರಾಗಿದ್ದರು. ಹಾಗೆಯೇ, ರಾಷ್ಟ್ರೀಯ ತಂಡದ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದ ಕಾರಣ ಟ್ರೆಂಟ್ ಬೌಲ್ಟ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ODI ಮತ್ತು T20I ತಂಡದಲ್ಲಿ ಫಿನ್ ಅಲೆನ್ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. ತಂಡದಲ್ಲಿ ವೇಗದ ಬೌಲರ್ ಆಡಮ್ ಮಿಲ್ನೆ ಬೌಲ್ಟ್ ಬದಲಿಗೆ ಸ್ಥಾನ ಪಡೆದಿದ್ದಾರೆ. ಗಾಯದ ಸಮಸ್ಯೆಯಿಂದ ಕೈಲ್ ಜೇಮಿಸನ್ ಹೊರಗುಳಿದಿದ್ದಾರೆ.
ತಂಡ: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್ವೆಲ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಲ್ಯೂಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಬ್ಲೇರ್ ಟಿಕ್ನರ್.
ನ್ಯೂಜಿಲೆಂಡ್ನಲ್ಲಿ ಭಾರತ ತಂಡದ ಪ್ರವಾಸದ ವಿವರವನ್ನು ನೋಡುವುದಾದರೆ, ಮೊದಲ ಟಿ20 ಪಂದ್ಯ ನವೆಂಬರ್ 18 ರಂದು ವೆಲ್ಲಿಂಗ್ಟನ್ ಮೈದಾನದಲ್ಲಿ ನಡೆಯಲಿದೆ. ಎರಡನೇ ಟಿ20 ಪಂದ್ಯ ನವೆಂಬರ್ 20 ರಂದು ಮೌಂಟ್ ಮೌಂಗನುಯಿ ಹಾಗೂ ಮೂರನೇ ಟಿ20 ಪಂದ್ಯ ನವೆಂಬರ್ 22ರಂದು ನೇಪಿಯರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಏಕದಿನ ಪಂದ್ಯ ನವೆಂಬರ್ 25ರಂದು ಆಕ್ಲೆಂಡ್ ಆತಿಥ್ಯ ವಹಿಸಿದೆ. ಎರಡನೇ ಏಕದಿನ ಪಂದ್ಯ ನವೆಂಬರ್ 27ಕ್ಕೆ ಹ್ಯಾಮಿಲ್ಟನ್ ಹಾಗೂ ಮೂರನೇ ಏಕದಿನ ಪಂದ್ಯ ನವೆಂಬರ್ 30ಕ್ಕೆ ಕ್ರೈಸ್ಟ್ಚರ್ಚ್ನಲ್ಲಿ ನಡೆಯಲಿದೆ.