ಹುಟ್ಟಿದ್ದು ಮುಂಬೈನಲ್ಲಿ.. ನೆಲೆಸಿರುವುದು ನ್ಯೂಜಿಲೆಂಡ್ನಲ್ಲಿ. ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವುದು ಕೂಡ ನ್ಯೂಜಿಲೆಂಡ್ ತಂಡದ ಪರವಾಗಿಯೇ. ಆದರೆ ತವರಿನಲ್ಲಿ ಟೆಸ್ಟ್ ಆಡುವ ಅವಕಾಶ ಸಿಕ್ಕಿತ್ತು. ಮುಂಬೈನಲ್ಲಿ ಕಣಕ್ಕಿಳಿದ ಸಂಭ್ರಮದಲ್ಲಿದ್ದ ಅಜಝ್ ಪಟೇಲ್ ಆ ಸಂಭ್ರಮವನ್ನು ಅಪರೂಪದ ದಾಖಲೆಯಾಗಿ ಬದಲಿಸಿಕೊಂಡಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿ ಕೇವಲ ಮೂವರು ಮಾಡಿರುವ ಸಾಧನೆ ಪಟ್ಟಿಗೆ ಪಟೇಲ್ ಸೇರಿಕೊಂಡರು.
ಟೆಸ್ಟ್ ಕ್ರಿಕೆಟ್ನಲ್ಲಿ ಅಜಝ್ ಪಟೇಲ್ ಇನ್ನಿಂಗ್ಸ್ ಒಂದರಲ್ಲಿ ಎಲ್ಲಾ 10 ವಿಕೆಟ್ ಪಡೆದ ನ್ಯೂಜಿಲೆಂಡ್ನ ಮೊದಲ ಕ್ರಿಕೆಟರ್ ಆಗಿ ದಾಖಲೆ ಬರೆದರು. ಒಟ್ಟಾರೆಯಾಗಿ ವಿಶ್ವದ ಮೂರನೇ ಕ್ರಿಕೆಟರ್ ಆಗಿ ಪಟೇಲ್ ಅಪರೂಪದ ದಾಖಲೆ ಪಟ್ಟಿಯಲ್ಲಿ ಸೇರಿಕೊಂಡರು. ಈ ಹಿಂದೆ ಇಂಗ್ಲೆಂಡ್ನ ಜಿಮ್ ಲೇಕರ್ ಮತ್ತು ಭಾರತದ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು.
ಮುಂಬೈ ಟೆಸ್ಟ್ನಲ್ಲಿ ಪಟೇಲ್ 47.5 ಓವರುಗಳ ಮ್ಯಾರಾಥಾನ್ ಬೌಲಿಂಗ್ ಸ್ಪೆಲ್ ಮಾಡಿದ್ದರು. 119 ರನ್ಗಳನ್ನು ನೀಡಿ ಎಲ್ಲಾ 10 ವಿಕೆಟ್ ಪಡೆದು ದಾಖಲೆ ಬರೆದರು. ಅಷ್ಟೇ ಅಲ್ಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಎಲ್ಲಾ 10 ವಿಕೆಟ್ ಪಡೆದ ಮೊದಲ ಬೌಲರ್ ಅನ್ನುವ ಖ್ಯಾತಿಯನ್ನು ಪಟೇಲ್ ಮುಡಿಗೇರಿಸಿಕೊಂಡರು.
ಈ ಹಿಂದೆ ಇಂಗ್ಲೆಂಡ್ನ ಜಿಮ್ ಲೇಕರ್ 1956ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಓಲ್ಡ್ ಟ್ರಾಫರ್ಡ್ ಟೆಸ್ಟ್ನಲ್ಲಿ 53 ರನ್ ಕೊಟ್ಟು 10 ವಿಕೆಟ್ ಪಡೆದಿದ್ದರು. ಭಾರತದ ಅನಿಲ್ ಕುಂಬ್ಳೆ ದೆಹಲಿಯ ಫಿರೋಜ್ ಷಾ ಮೈದಾನದಲ್ಲಿ 1999ರಲ್ಲಿ ಪಾಕಿಸ್ತಾನ ವಿರುದ್ಧ 74 ರನ್ ನೀಡಿ ಎಲ್ಲಾ 10 ವಿಕೆಟ್ ಪಡೆದುಕೊಂಡಿದ್ದರು. ಈಗ ಪಟೇಲ್ ಮೂರನೇ ಬೌಲರ್ ಆಗಿ ಈ ವಿಶಿಷ್ಠ ಪಟ್ಟಿ ಸೇರಿಕೊಂಡಿದ್ದಾರೆ. ಪಟೇಲ್ ಸಾಧನೆಗೆ ವಿಶ್ವದ ಎಲ್ಲೆಡೆಯಿಂದ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿದೆ.