ಮಲೇಷ್ಯಾದ ಬಾಂಗಿಯಲ್ಲಿ ನಡೆದ ಟಿ-20 ಪಂದ್ಯದಲ್ಲಿ ನೇಪಾಳ ವನಿತೆಯರು ಕೇವಲ ಎಂಟು ರನ್‌ಗೆ ಆಲೌಟ್ ಆಗಿದ್ದು ಗಮನ ಸೆಳೆದಿದೆ.
ಯುನೈಟೆಡ್ ಅರಬ್ ಏಮಿರೇಟ್ಸ್ (ಯುಎಇ) ವಿರುದ್ಧ ನಡೆದ 19 ವರ್ಷಕ್ಕಿಂತ ಕಿರಿಯರ ಟಿ-20 ಪಂದ್ಯದಲ್ಲಿ ನೇಪಾಳ ವನಿತೆಯರು ಕೇವಲ ಎಂಟು ರನ್‌ಗೆ ಆಲೌಟ್ ಆದರು. ಉತ್ತರವಾಗಿ ಯುಎಇ ವನಿತೆಯರು ಕೇವಲ ಏಳು ಎಸೆತಗಳಲ್ಲಿ ಜಯದ ಗುರಿ ಮುಟ್ಟಿ ನೇಪಾಳ ವನಿತೆಯರ ವಿರುದ್ಧ 10 ವಿಕೆಟ್ ಭರ್ಜರಿ ಜಯ ದಾಖಲಿಸಿದರು.
ಯುಎಇ ತಂಡದ ವೇಗದ ಬೌಲರ್ ಮಹಿಕಾ ಗೌರ್ ನಾಲ್ಕು ಓವರ್‌ಗಳಲ್ಲಿ ಎರಡು ಮೆಡನ್ ಸೇರಿದಂತೆ ಕೇವಲ ಎರಡು ರನ್ ನೀಡಿ ಐದು ವಿಕೆಟ್ ಕಬಳಿಸುವ ಮೂಲಕ ನೇಪಾಳ ತೀವ್ರ ಕುಸಿತಕ್ಕೆ ಪ್ರಮುಖ ಪಾತ್ರ ವಹಿಸಿದರು.
19 ವರ್ಷಕ್ಕಿಂತ ಕಿರಿಯರ ಟಿ-20 ಅರ್ಹತಾ ಸುತ್ತಿಗಾಗಿ ನಡೆದ ಪಂದ್ಯದಲ್ಲಿ ನೇಪಾಳ ವನಿತೆಯರು ಕೇವಲ ಎಂಟು ರನ್‌ಗೆ ಆಲೌಟ್ ಆದರು. ಯುಎಇ ಆರಂಭಿಕ ಆಟಗಾರ್ತಿಯರಾದ ತೀರ್ಥ ಸತೀಶ್ ಹಾಗೂ ಲಾವಣ್ಯ ಕೇನಿ 1.1 ಓವರ್‌ಗಳಲ್ಲಿ ತಂಡವನ್ನು ಜಯದ ಗುರಿಗೆ ಮುಟ್ಟಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನೇಪಾಳ, 8.1 ಓವರ್‌ಗಳಲ್ಲಿ 8 ರನ್‌ಗೆ ಆಲೌಟ್ ಆಯಿತು. ಆರು ಆಟಗಾರ್ತಿಯರು ಶೂನ್ಯ ಸಾಧನೆ ಮಾಡಿದರು.
2017 ರಲ್ಲಿ ನಾಗಲ್ಯಾಂಡ್‌ನ 19 ವರ್ಷಕ್ಕಿಂತ ಕಿರಿಯರ ವನಿತೆಯರ ತಂಡ, ಕೇರಳ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಕೇವಲ ಎರಡು ರನ್‌ಗೆ ಆಲೌಟ್ ಆಗಿತ್ತು.