ಟೋಕಿಯೋ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮತ್ತೊಮ್ಮೆ ಮುರಿದಿದ್ದಾರೆ. ಸ್ಟಾಕ್ ಹೋಮ್ ಡೈಮಂಡ್ ಲೀಗ್ ನಲ್ಲಿ ನೀರಜ್ 89.94 ಮೀಟರ್ ದೂರ ಎಸೆದು ತಮ್ಮ ದಾಖಲೆ ಉಥತಮ ಪಡಿಸಿಕೊಂಡಿದ್ದಾರೆ.
ಜೂನ್ 14ರಂದು ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ 89.03 ಮೀಟರ್ ದೂರ ಎಸೆದಿದ್ದರು. ಇದೀಗ ಅವರು ಈ ದಾಖಲೆಯನ್ನು ಮುರಿದಿದ್ದಾರೆ ಆದರೆ ಮತ್ತೊಮ್ಮೆ 90 ಮೀಟರ್ ಏಸೆಯುವುದನ್ನು ಕೊಂಚದರಲ್ಲಿ ತಪ್ಪಿಸಿಕೊಂಡರು. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ ನೀರಜ್ ಜೂನ್‌ನಲ್ಲಿಯೇ ಮೈದಾನಕ್ಕೆ ಮರಳಿದ್ದರು.
ಮೊದಲ ಎಸೆತದಲ್ಲಿ ದಾಖಲೆ
ನೀರಜ್ ಚೋಪ್ರಾ ಮೊದಲ ಎಸೆತದಲ್ಲೇ ರಾಷ್ಟ್ರೀಯ ದಾಖಲೆ ಮುರಿದರು. ಎರಡನೇ ಎಸೆತ 84.37, ಮೂರನೇ ಎಸೆತ 87.46, ನಾಲ್ಕನೇ ಎಸೆತ 84.67, ಐದನೇ ಎಸೆತ 86.67, ಆರನೇ ಎಸೆತ 86.84 ಮೀಟರ್ಸ್ ಎಸೆದರು. ಈ ವೇಳೆ ಅವರು ಒಂದೇ ಒಂದು ಫೌಲ್ ಮಾಡಲಿಲ್ಲ. ಟೋಕಿಯೊ ಒಲಿಂಪಿಕ್ಸ್ ನಂತರ ನೀರಜ್ ಅವರ ಮೂರನೇ ಸ್ಪರ್ಧೆ ಇದಾಗಿದೆ. ಹಿಂದಿನ ಎರಡು ಸ್ಪರ್ಧೆಗಳಲ್ಲಿ ಅವರು ಬೆಳ್ಳಿ ಮತ್ತು ಚಿನ್ನದ ಪದಕಗಳನ್ನು ಗೆದ್ದಿದ್ದರು.
ನೀರಜ್ ಚೋಪ್ರಾ ರಾಷ್ಟ್ರೀಯ ದಾಖಲೆ ಮುರಿದರೂ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಕೆರಿಬಿಯನ್ ದೇಶದ ಗ್ರೆನಡಾದ ಪೀಟರ್ಸ್ ಆಂಡರ್ಸನ್ ಚಿನ್ನದ ಪದಕ ಗೆದ್ದರು. 24ರ ಹರೆಯದ ಆ್ಯಂಡರ್ಸನ್ 90.31 ಮೀಟರ್ ದೂರ ಎಸೆದರು. ಆಂಡರ್ಸನ್ ಈ ಋತುವಿನಲ್ಲಿ 93.07 ಮೀಟರ್‌ಗಳನ್ನು ಎಸೆದಿದ್ದಾರೆ. ನೀರಜ್ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.
ಡೈಮಂಡ್ ಲೀಗ್‌ನಲ್ಲಿ ಮೊದಲ ಪದಕ
ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾಗೆ ಇದು ಮೊದಲ ಪದಕವಾಗಿದೆ. ಇದಕ್ಕೂ ಮೊದಲು ಅವರ ಅತ್ಯುತ್ತಮ ಪ್ರದರ್ಶನ ನಾಲ್ಕನೇ ಸ್ಥಾನವಾಗಿತ್ತ. ಜರ್ಮನಿಯ ಜೂಲಿಯನ್ ವೆಬರ್ 89.08 ಮೀಟರ್ ದೂರ ಎಸೆದು ಕಂಚಿನ ಪದಕ ಪಡೆದರು. ಇದೀಗ ನೀರಜ್ ಚೋಪ್ರಾ ಜುಲೈ 15 ರಿಂದ 24 ರವರೆಗೆ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕದತ್ತ ಹೆಜ್ಜೆ ಇಟ್ಟಿದ್ದಾರೆ.