ಕ್ವಿನ್ಟೌನ್ನಲ್ಲಿ ಬ್ಯಾಟಿಂಗ್ ಮಾಡಲು ಆರಂಭಿಸಿದ ಭಾರತಕ್ಕೆ ಮೇಘನಾ ಮತ್ತು ಶಫಾಲಿ ವರ್ಮಾ 61 ರನ್ಗಳ ಆರಂಭ ತಂದುಕೊಟ್ಟರು. ಶಫಾಲಿ 24 ರನ್ಗಳಿಸಿ ಔಟಾದರು. ಯಸ್ತಿಕಾ ಭಾಟಿಯಾ ಮತ್ತು ಮೇಘನಾ ಜೋಡಿ ತಂಡದ ಮೊತ್ತವನ್ನು 110 ರನ್ಗಳಿಗೆ ತಲುಪಿಸಿದೆ. ಯಸ್ತಿಕಾ 31 ರನ್ಗಳಿಸಿ ಪವೆಲಿಯನ್ ಸೇರಿಕೊಂಡರೆ, ಮೇಘನಾ 49 ರನ್ಗಳಿಗೆ ಔಟಾಗಿ ನಿರಾಸೆ ಅನುಭವಿಸಿದರು.
ನಾಯಕಿ ಮಿಥಾಲಿ ರಾಜ್ ಮತ್ತೊಮ್ಮೆ ತಂಡವನ್ನು ಆಧರಿಸಿದರು. ಆದರೆ ಹರ್ಮನ್ ಪ್ರಿತ್ ಕೌರ್ (10) ಬೇಗನೆ ಔಟಾದರು. ಆದರೆ ರಿಚಾ ಘೋಷ್ ಮಿಥಾಲಿ ಜೊತೆ ಸೇರಿಕೊಂಡು ಉತ್ತಮ ಆಟ ಆಡಿದರು. ರಿಚಾ 65 ರನ್ಗಳಿಸಿ ಔಟಾದರೆ, ಮಿಥಾಲಿ ಅಜೇಯ 66 ರನ್ಗಳಿಸಿದರು. 50 ಓವರುಗಳಲ್ಲಿ ಭಾರತ 6 ವಿಕೆಟ್ ಕಳೆದುಕೊಂಡು 270 ರನ್ಗಳಿಸಿತು.
ಗುರಿ ಬೆನ್ನಟ್ಟಲು ಶುರು ಮಾಡಿದ ನ್ಯೂಜಿಲೆಂಡ್ ಮೊದಲಿಗೆ ಸೂಜಿ ಬೇಟ್ಸ್ (16) ವಿಕೆಟ್ ಕಳೆದುಕೊಂಡಿತು. ಸೋಫಿ ಡಿವೈನ್ (33) ರನ್ಗಳಿಸಿ ಮಿಂಚಿನ ಆಟವಾಡಿದರು. ಆಮಿ ಸ್ಯಟರ್ವೇಟ್ ಶೂನ್ಯಕ್ಕೆ ಔಟಾದರು. ಆದರೆ ಅಮೆಲಿಯ ಕೇರ್ ಮತ್ತು ಮ್ಯಾಡಿ ಗ್ರೀನ್ ತಂಡಕ್ಕೆ ಆಧಾರವಾದರು.
ಅಮೆಲಿಯ ಅಜೇಯ 119 ರನ್ಗಳಿಸಿ ಗೆಲುವಿನ ರೂವಾರಿಯಾದರು. ಗ್ರಿನ್ 52 ರನ್ಗಳ ಕೊಡುಗೆ ನೀಡಿದರು. ಬ್ರೂಕ್, ಹಾಲ್ಲಿಡೆ, ಕೇಟಿ ಮಾರ್ಟಿನ್ ಮತ್ತು ಹೇಲಿ ಜೆನಸೆನ್ ವಿಕೆಟ್ ಕಳೆದುಕೊಂಡರೂ ಅಮೆಲಿಯ ತಂಡಕ್ಕೆ ಗೆಲುವು ತಂದುಕೊಟ್ಟರು. ನ್ಯೂಜಿಲೆಂಡ್ 49 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.