ಕೊಹ್ಲಿ ವಿಕೆಟ್ ಪಡೆಯೋದು ನನ್ನ ಕನಸು : ಹಸರಂಗ Hasaranga saaksha tv
ಕ್ರಿಕೆಟ್ ರಾಕ್ಷಸ ವಿರಾಟ್ ಕೊಹ್ಲಿ, ಹೆಚ್ಚು ಕಡಿಮೆ ಎಂಬ ಲೆಕ್ಕ ಇಲ್ಲದೇ ಎಲ್ಲ ಬೌಲರ್ ಗಳನ್ನು ಸಮಾಂತರವಾಗಿ ದಂಡಿಸುತ್ತಾರೆ. ಕ್ರೀಸ್ ಗೆ ಕಚ್ಚಿ ನಿಂತರೇ ಬೌಲರ್ ಗಳನ್ನ ಲೆಕ್ಕಿಸದ ಕೊಹ್ಲಿ ವಿರಾಟ ರೂಪ ಪ್ರದರ್ಶನ ನೀಡುತ್ತಾರೆ.
ಹೀಗೆ ಬೌಲರ್ ಗಳಿಗೆ ಸಿಂಹಸ್ವಪ್ನವಾಗುವ ವಿರಾಟ್ ಕೊಹ್ಲಿ ವಿಕೆಟ್ ಪಡೆಯಬೇಕೆಂದು ವಿಶ್ವ ಕ್ರಿಕೆಟ್ನ ಅನೇಕ ಬೌಲರ್ಗಳು ಕನಸು ಕಾಣುತ್ತಾರೆ. ಹಾಗೇ ಹೇಳಿಕೊಂಡ ಅನೇಕರು ವಿರಾಟ್ ವಿಕೆಟ್ ಪಡೆದಿದ್ದಾರೆ. ಅದೇ ರೀತಿ ವಿರಾಟ್ ಹೆಸರು ಕೇಳೇ ಇಲ್ಲ ಎಂದು ಪೋಸ್ ಕೊಟ್ಟಿದ್ದ ಬೌಲರ್ ಗಳಿಗೆ ಕೊಹ್ಲಿ ಮರೆಯದಂತಹ ಗಿಫ್ಟ್ ಕೊಟ್ಟಿದ್ದಾರೆ.
ಇದು ಏನೇ ಇರಲಿ.. ಸದ್ಯ ವಿಶ್ವ ಟಿ20 ನಂ.1 ಬೌಲರ್ ಆಗಿರುವ ವನಿಂದು ಹಸರಂಗ ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಮಾತನ್ನ ಹೊರಹಾಕಿದ್ದಾರೆ. ತಮ್ಮ ಕ್ರಿಕೆಟ್ ಜೀವನದಲ್ಲಿ ಒಮ್ಮೆಯಾದರೂ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದು ನನ್ನ ಕನಸಾಗಿತ್ತು ಎಂದು ಹಸರಂಗ ಹೇಳಿದ್ದಾರೆ.
ಅಂದಹಾಗೆ ಹಸರಂಗ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಆದ್ರೆ ಪ್ರಾಕ್ಟೀಸ್ ವೇಳೆಯಲ್ಲೂ ಕೂಡ ವಿರಾಟ್ ಕೊಹ್ಲಿ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹಸರಂಗ ತಿಳಿಸಿದ್ದಾರೆ.
ಇನ್ನು ಸಂದರ್ಶನದಲ್ಲಿ ಹಸರಂಗ.. “‘ನನ್ನ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆಯುವುದು ನನ್ನ ಕನಸು. ನಾನು ಬಾಬರ್ ಅಜಮ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ವಿಕೆಟ್ಗಳನ್ನು ಸಹ ಪಡೆಯಬೇಕೆಂದು ಬಯಸುತ್ತೇನೆ. ನಾನು ಬೌಲಿಂಗ್ ಮಾಡುವಾಗ .. ನಾನು ಯಾವಾಗಲೂ ವಿಕೆಟ್ ಪಡೆಯಲು ಪ್ರಯತ್ನಿಸುತ್ತೇನೆ. ನಾನು ಆಡುವಾಗ ರಾಷ್ಟ್ರೀಯ ತಂಡ .. ತಂಡದ ಗೆಲುವಿಗಾಗಿ ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಒತ್ತಡ ಏನೇ ಇದ್ದರೂ ನನ್ನ ಕೆಲಸವನ್ನು ಪೂರ್ಣಗೊಳಿಸುತ್ತೇನೆ. ನಾನು ಮುರಳೀಧರನ್ ಮತ್ತು ಹೆರಾತ್ ಅವರನ್ನು ಆದರ್ಶವಾಗಿ ತೆಗೆದುಕೊಂಡಿದ್ದೇನೆ. ಆದರೆ ಮುಂದಿನ ಮುರಳೀಧರನ್ ಅಥವಾ ಹೆರಾತ್ ಆಗಲು ಯಾವ ದಿನವೂ ನಾನು ಬಯಸುವುದಿಲ್ಲ. ಯಾಕಂದರೇ ನಾನು ನಾನಾಗಿರಲು ಬಯಸುತ್ತೇನೆ ಎಂದು ಹಸರಂಗ ತಿಳಿಸಿದ್ದಾರೆ.
ಇನ್ನು ಶ್ರೀಲಂಕಾದ ಸ್ಟಾರ್ ಆಲ್ ರೌಂಡರ್ ವನಿಂದು ಹಸರಂಗ ಟಿ20 ವಿಶ್ವಕಪ್ನಲ್ಲಿ ಮಿಂಚು ಹರಿಸಿದ್ದರು. ಚುಟುಕು ಕ್ರಿಕೆಟ್ ಸಮರದಲ್ಲಿ 8 ಪಂದ್ಯಗಳನ್ನು ಆಡಿರುವ ಹಸರಂಗ 16 ವಿಕೆಟ್ಗಳನ್ನು ಕಬಳಿಸಿದ್ದರು.